Mar 16, 2011

*
ನನ್ನ ಪ್ರೀತಿಯ
*
*ರಾಘವೇಂದ್ರಭಾಗ್ಯ*
*
*ಗಜೇಂದ್ರವೀಣಾ *
*
 *ಸಂಧ್ಯಾಮನೋಹರ್
*
ಇವರಿಗೆ ವಿವಾಹ ವಾರ್ಷಿಕೋತ್ಸವದ ಹಾರ್ಧಿಕ
ಶುಭಾಶಯಗಳೊಂದಿಗೆ 
 ಈ ಯುವ ಜೋಡಿಗಳಿಗೆ ಉಡುಗೊರೆಯಾಗಿ  ಈಕವನ
*
ಬಂಗಾರದ ಸರ....! 
*
ಕೊಂಡಿ ಕೊಂಡಿ ಬೆಸೆದ ಹಾರ
ಸವೆದಂತೆಲ್ಲ ಬೆಸುಗೆ ಹಾಕಿ
ಕೊರಳಲ್ಲಿ ಧರಿಸಿ ಆನಂದಿಸಬೇಕು...
*
ಎನ್ನುವಷ್ಟರಲ್ಲಿ, ಮತ್ತೊಂದೆಡೆ
ಕೊಂಡಿ ಬಿಟ್ಟು, ಕಳೆದುಕೊಳ್ಳುವ
ಭಯ. ಕಡೆಗಣಿಸುವಂತಿಲ್ಲ
*
ಅದು ಬಂಗಾರದ ಸರ ,
ಬಲು ದುಬಾರಿ ....!!
*
ಕರಗಿಸಿ ಹೊಸತಾಗಿಸಲು 
ಕೊಳೆ, ಕೂಲಿ, ಬೆಸುಗೆ
ಎಂದೆಲ್ಲ ಕಳೆವರು ಮೌಲ್ಯ ,
*
ಹೊಸದಕ್ಕೂ ತೆರಬೇಕು 
ದುಪ್ಪಟ್ಟು ದಂಡ .....!
*
ಬೋಳು ಕೊರಳಲಿ ಹೊರಟರೆ, 
ಎದುರಿಸಬೇಕು ಪ್ರಶ್ನೆಗಳ ಸುರಿಮಳೆ, 
ಅವಶ್ಯವಿಲ್ಲದ ಅನಿವಾರ್ಯತೆ ...!
*
ಸವೆದು ಬೆಸುಗೆ ಬಿಟ್ಟು
ಕಳೆದುಕೊಳ್ಳುವ ಮುನ್ನವೇ 
ಕೊಂಡಿಕೊಂಡಿ ಬೆಸೆಯಿಸಿ 
ಪಾಲಿಶು ಹಾಕಿಸಿ ಹಳತನೆ
ಹೊಸದಾಗಿಸಿ ಧರಿಸಬೇಕು 
*
ಥಳಥಳ ಹೊಳೆವ  
ಬೆಲೆಬಾಳುವ ಸೂಕ್ಷ್ಮ 
ಸಂಬಂಧದ ಬಂಧಗಳ 
ಸರ,  ಬಂಗಾರದ ಸರ 
*****************

Feb 27, 2011

     "ಮೂರ್ಖಳಾದಳೇಕೇ .......? "
 
 
ಕೆರಳಿ ಉರುಳಾಗದೇ
 
ಅರಳಿ  ನೆರಳಾಗಿ 
 
ಮರಳಿ ಮಾತೆಗೇ
 
ಮಾತೆಯಾಗುವ 
 
ಮಗಳನು, ಹಡೆವವಳೇ
 
ಹತ್ಯೆಗೈವ
 
        ಮೂರ್ಖಳಾಗುವಳೇಕೇ.....?...!
 
ಗಂಡೆಂಬ ಗುಂಡಿಗೆ
 
ಎದೆಯೊಡ್ಡುವ
 
         ಸಂಭ್ರಮಕೇ.......?...!

Feb 17, 2011

     "ಹಂಚಿ ತಿಂದವನಿಗೆ ಹಸಿವಿಲ್ಲ"

   "ಹಂಚಿತಿಂದವನಿಗೆ ಹಸಿವಿಲ್ಲ" ನಮ್ಮ ಹಿರಿಯರು ಸ್ವತಹ ಅನುಭವಿಸಿಯೇ ಈ ನಾಣ್ನುಡಿ ,ಗಾದೆ ಮಾತುಗಳನ್ನು 
ಹೇಳಿದ್ದಾರೆ ಎನ್ನುವುದು, ನಮ್ಮಅನುಭವಕ್ಕೆ ಬಂದಾಗಲೇ ಈ  ಚಂದದ ನುಡಿಮುತ್ತಿನ ಮಹತ್ವದ ಅರಿವಾಗುವುದು.
ಹಂಚಿ ತಿನ್ನುವುದು ಕೇವಲ ಆಹಾರವನ್ನು ಮಾತ್ರವಲ್ಲ ,ಸುಖ  ಹಂಚಿಕೊಂಡಾಗಲೂ ಸಿಗುವ  ಸಂತೋಷ,ಸಂತೃಪ್ತಿ  
ಅಪರಿಮಿತವಾದದ್ದು.   ಹಾಗೆಯೇ ದುಃಖವನ್ನು ಹಂಚಿಕೊಂಡಾಗ ಮನಸ್ಸು ಹಗುರವಾಗುವುದು. ಹಾಗೆ ನಮ್ಮ
ಸಂತೋಷ ಸಂಭ್ರಮವನ್ನು ಹಂಚಿಕೊಂಡಾಗ ಆ ಸಂತಸ ಇಮ್ಮಡಿಗೊಳ್ಳುವುದು.ಈ "ಹಂಚಿಕೋ"ಎನ್ನುವ ಪದದ ಹಂದರವೇ  ಹರವಾದದ್ದು. ಈಹಂಚಿಕೊಳ್ಳುವ ಅನುಭವವಾಗುವುದು ಮಹಿಳೆಯರಿಗೆ ಹೆಚ್ಚಿನ ಪಾಲು. ಅದು ಹೇಗೆ 
ಪುರುಷರಿಗೇನು ಆಗೋಲ್ವೇ ?ಅಂತ ಕೇಳ್ತಿರಾ ....?ಅವರಿಗೂ ಇರತ್ತೆ .ಆದರೆ ಈ ಅವಕಾಶ ಮಹಿಳೆಯರಿಗೆ ಹೆಚ್ಚು. 
ಹೇಗೆ ಅಂತಿರ .ಸಾಮಾನ್ಯವಾಗಿ ಮನೆಯ ಉಸ್ತುವಾರಿ ,ಅದರಲ್ಲೂ ಪಾಕಶಾಲೆಯ ಉಸ್ತುವಾರಿ
ಮಹಿಳೆಯರದ್ದೇ. ಜೊತೆಗೆ ಅರ್ಧಕ್ಕೆ ಅರ್ಧ ಮಹಿಳೆಯರು ಮನೆಯಲ್ಲೇ ಇರುವುದರಿಂದ ಎಲ್ಲವನ್ನು
ಹಂಚಿಕೊಳ್ಳುವ ಅವಕಾಶ ಹೆಚ್ಚು.ಕೆಲಒಮ್ಮೆ ಏನೋ ಒಂದು ವಿಶೇಷ ಖಾದ್ಯ ಯಾರೋ ಒಬ್ಬ ಅತಿಥಿಗಾಗಿ
ಬಹಳ ಪ್ರೀತಿ ಶ್ರದ್ಧೆಗಳಿಂದ ತಯಾರಿಸಿರುತ್ತೇವೆ.ಅದಕ್ಕೆ ಅನಿರೀಕ್ಷಿತವಾಗಿ ಹಲವಾರು ಅಭ್ಯಾಗತರು ಆಗಮಿಸಿ 
ಸವಿಯಾದ  ತಿನಿಸಿಗೆ ಪಾಲುದಾರರಾಗಿ ಸವಿದು ಸಂತಸದಿಂದ ಆಸ್ವಾದಿಸುತ್ತಾರೆ.ಇಂತಹಾ ಹಲವಾರು ಮನಗಳ 
ಸಂತೃಪ್ತಿಗೆ ಕಾರಣವಾದ ಮನಕೆ ಅದಿನ್ನೆಷ್ಟು ಸಂತೋಷವಾಗುವುದು.ಅದು ಅನುಭವಿಸಿದವರಿಗೆ ಗೊತ್ತು.ಅಂತಹಾ ಪ್ರಸಂಗಗಳಲ್ಲಿ ಒಂದೆರಡನ್ನು ಇಲ್ಲಿ ತೆರೆದಿಡುತ್ತಿದ್ದೇನೆ.
          ಒಮ್ಮೆ ನಮ್ಮ ಆತ್ಮೀಯ ಸ್ನೇಹಿತರೊಬ್ಬರು ಬರುವವರಿದ್ದರು.ಅದಕ್ಕಾಗಿಯೇ  ಬಹಳ ರುಚಿಕರವಾದ 
"ಸಬ್ಬಸಿಗೆಕಾಯಿಇಡ್ಲಿ"ಯನ್ನು ಸ್ವಲ್ಪ ಪ್ರಮಾಣದಲ್ಲಿಯೇ ತಯಾರಿಸಿದ್ದೆ.ಸಾಮಾನ್ಯವಾಗಿ ಅದು ಎಲ್ಲರಿಗೂ 
ಪ್ರಿಯವಾದದ್ದು.ನನ್ನಅಜ್ಜಿ ತಯಾರಿಸುತ್ತಿದ್ದ ವಿಶೇಷವಾದ ಸಾಂಪ್ರದಾಯಿಕ ಅಡುಗೆ.ಒಮ್ಮೆ"ಜೀ ಕನ್ನಡದ 
ಸವಿರುಚಿ "ಯಲ್ಲೂ    ತಯಾರಿಸಿದಾಗ ,ಕ್ಷಣದಲ್ಲಿಯೇ ಸಿಬ್ಬಂದಿಯವರು ಎಲ್ಲಾ ಖಾಲಿ ಮಾಡಿಬಿಟ್ಟಿದ್ದರು.
ನೀವೂ ಒಮ್ಮೆ ಮಾಡಿ, ಸವಿದರೆ  ನಿಮಗೆ ತಿಳಿಯುತ್ತೆ.ಬಿಸಿಬಿಸಿಯಾಗಿ ಹಬೆಯಾಡುತ್ತಾ, ಘಮಘಮಿಸುವ     
ಈ ಇಡ್ಲಿಗೆ ಕೊಬ್ಬರಿಚಟ್ನಿ ಜೊತೆಗೆ ಬೆಣ್ಣೆ  ಇದ್ದರೆ,... ಆಹಾ....ಅದರ ಸವಿ ಸವಿದವರೇ ಬಲ್ಲರು.ಇರಲಿ ಈಗ 
ನನ್ನಕತೆ ಮುಂದುವರಿಸುತ್ತೇನೆ.ಅಂದು ಸ್ನೇಹಿತರು ಸೇರಿ ಐದು ಜನರಿಗೆಂದು ತಯಾರಿಸಿದ್ದಕ್ಕೆ,ಅಕ್ಕಭಾವ 
ಅವರ ಮಕ್ಕಳು,ಭಾವನ ತಂಗಿ ಮಕ್ಕಳು ,ಆಯ್ತಾ, ನಂತರ ಒಂದುಗಂಟೆ ಬಿಟ್ಟು ನಮ್ಮ ಅಪ್ಪಅಮ್ಮಬಂದರು.
ಎಲ್ಲರೂ  ಸವಿದರು.ನನ್ನೋಬ್ಬಳನ್ನು ಬಿಟ್ಟು.ಆದರೆ ಅಷ್ಟನ್ನೂ ನಾನೊಬ್ಬಳೇ ಸವಿದು ಸಂತೃಪ್ತಳಾದಷ್ಟು
ಸಂತಸವಾಗಿತ್ತು.ಅದಕ್ಕಿಂತಲೂ ಮಿಗಿಲಾಗಿ ನಾನು ತಿಂದಿಲ್ಲ ಅನ್ನೋದೇ ಮರೆತು ಹೋಗಿತ್ತು.
         ಹೀಗೆ ನನ್ನ ಬಿಎಡ್ ಫಲಿತಾಂಶ ಬರುವ  ಹಿಂದಿನ ದಿನ ನಮ್ಮ ತಂದೆಯೊಡನೆ ಅವರ ಜಮೀನಿಗೆ ಹೋಗಿದ್ದೆ.
ನನಗೂ ಈ ಹೊಲಬೆಳೆಇವೆಲ್ಲ ನೋಡೋದು ಮಾಡೋದು ಅಂದ್ರೆ ತುಂಬಾ ಖುಷಿ.ನಮ್ಮತಂದೆನು ಯಾರನ್ನು ಅವರ
ಜಮೀನಿನ ಹತ್ತಿರ ಕರೆದುಕೊಂಡು ಹೋಗ್ತಾ ಇರಲಿಲ್ಲ,ಆದರೆ ಅಲ್ಲಿನ ಹಳ್ಳಿಯ ಮಕ್ಕಳಿಗೆ ಹಿಂದಿ ಪಾಠ ಮಾಡೋದಕ್ಕೆ
ನನ್ನ ಕರೆದುಕೊಂಡು ಹೋಗ್ತಾಇದ್ರೂ. ಹೋಗಿದ್ದೆ.ಅಲ್ಲಿ ಆಲುಗಡ್ಡೆ,ಬೀನ್ಸ,ಬೀನ್ಸಕಾಳು,ದಂಟಿನ ಸೊಪ್ಪು,ದಂಟು,
ಬೆಂಡೆಕಾಯಿ,ಮೂಲಂಗಿ ಎಲ್ಲಾ ತಂದಿದ್ದೆ.ಇರೋರು ನಾಲ್ಕು ಮಂದಿ  ಹೇಗೆ ಇವೆಲ್ಲ ಮುಗಿಸೋದು.ಕಷ್ಟ ಪಟ್ಟು 
ತಂದಿರೋದೆಲ್ಲ  ಹಾಳಾಗಿ ಹೋಗತ್ತೆ.ಈಗಿನಂತೆ ತಂಗಳ ಡಬ್ಬಿನು ಇರಲಿಲ್ಲ.ಮಾರನೆ ದಿನ ಆಗಷ್ಟ ಹದಿನೈದರ
ಸಂಭ್ರಮ,ನನ್ನ ಫಲಿತಾಂಶದ ಸಂಭ್ರಮ ಎಲ್ಲಾ ಸೇರಿ ಸಂಭ್ರಮ ಪಟ್ಟಿದ್ದು ನನ್ನವರೂ,ನಾನು ಪಾಕಶಾಲೆ ಸೇರಿದೆ
ದಂಟಿನ ಪಲ್ಲೆ,ಹಸಿಕಾಳಿನ ಫಲಾವ್,ಸೊಪ್ಪಿನ ಹುಳಿ,ಹುರುಳಿಕಾಳು ಪಲ್ಯ ,ಕೆಸರಿಬಾತು ಮತ್ತು ಮೂಲಂಗಿ 
ಸಲಾಡ್ ಇವಿಷ್ಟನ್ನು ತಯಾರಿಸುತ್ತಿರುವಾಗಲೇ ಬೆಳಗ್ಗೆ ಒಂಬತ್ತರ ಸಮಯ ನನ್ನ ಪತಿಯವರ ಸ್ನೇಹಿತರು 
ಪ್ರಥಮ   ಅತಿಥಿಯಾಗಿ ಆಗಮಿಸಿದರು.ಸಲಾಡ್ ಕೇಸರಿಬಾತ್ ಮತ್ತು ಹಾಲಿನ ಆತಿಥ್ಯನೀಡಿ ಅವರೊಂದಿಗೆ
ತಮ್ಮ ಸಂಭ್ರಮವನ್ನು ಹಂಚಿಕೊಳ್ಳುತ್ತಿರುವಾಗ ನನ್ನಗೆಳತಿ ಆಗಮಿಸಿದರು.ಅವರನ್ನು ಆತ್ಮೀಯತೆಯಿಂದ 
ನಮ್ಮವರೇ ಸ್ವಾಗತಿಸಿ  ನನ್ನನ್ನು ಕೂಗಿ ನೋಡು ನಿಮ್ಮ ಫ್ರೆಂಡ್ ಬಂದಿದ್ದಾರೆ  ಎಂದರು .ನಾನು ಹೊರಬಂದು 
ಬನ್ನಿಬನ್ನಿ ಕಂಗ್ರಜುಲೆಶನ್ ಎಂದೇ.ನಿಮಗೂ ಕಂಗ್ರಾಜುಲೆಶನ್ನಪ್ಪ.ಎಂದರು.ಅವರಿಗೂ ಅದೆಅತಿಥ್ಯ ನೀಡಿ 
ಮತ್ತೇ ಪಾಕಶಾಲೆಯನ್ನುಸೇರಿದೆ.ಎಂದೂ ನನ್ನಸ್ನೇಹಿತೆಯರೊಂದಿಗೆ ಮಾತನಾಡದೆ ಇದ್ದವರು ಅಂದು ಸಂಬ್ರಮದಿಂದ ಆತ್ಮೀಯತೆಯಿಂದ ಮಾತನಾಡಿಸುತ್ತಿದ್ದರು,ನಾನು ಒಳಗಿನಿಂದಲೇ ಧ್ವನಿಗೂಡಿಸುತ್ತಿದ್ದೆ.
ಮತ್ತೇ ಒಂದು ಗಂಟೆಯ ನಂತರ ಮತ್ತೇ ಇಬ್ಬರು ಇವರ ಸ್ನೇಹಿತರು,ಅವರಿಗೂ ಮತ್ತೇ ಅದೇ ಆತಿಥ್ಯ.
ಜೊತೆಗೆ ನಮ್ಮ ಮಕ್ಕಳು .ಸಲಾಡ್ ಕೇಸರಿಬಾತ್ ಮುಗಿಯಿತು.ಅವರನ್ನು ಕಳುಹಿಸಿ ಕೊಡುವ 
ವೇಳೆಗಾಗಲೇ ಒಂದುಗಂಟೆ ಸಮಯ ನಾನು ಇವರು ಇಗಲಾದ್ರು ತಿಂಡಿ ತಿನ್ನೋಣ ಎಂದು ತಟ್ಟೆಗೆ 
ಫಲಾವ್  ಪಲ್ಯ ಹಾಕಿಕೊಂಡು ಕುಳಿತೆವು.ಅಷ್ಟರಲ್ಲಿ ಇಬ್ಬರು ಸಂಭಂದಿಕರು ಸಮಾರಂಭಕ್ಕೆ ಕರೆಯೋಲೆಯನ್ನು
ನೀಡಲೆಂದು  ಬಂದರು.ಅವರನ್ನು ಸ್ವಾಗತಿಸಿ ನಮಗೆ ಬಡಿಸಿಕೊಂಡಿದ್ದ  ತಟ್ಟೆಯನ್ನೇ ಅವರಿಗೆ ಕೊಟ್ಟು 
ಉಪಚರಿಸಿ,ಮಾತನಾಡಿಸಿ ಫಲ ತಾಂಬೂಲ ಕೊಟ್ಟು ಕಳುಹಿಕೊಡುವಷ್ಟರಲ್ಲಿ ಇನ್ನಿಬ್ಬರು ನೆಂಟರು ಆಗಮಿಸಿದರು.
ಅವರಿಗೂ   ಉಪಚರಿಸಿ ಮಾತನಾಡಿಸಿ ಕಳುಹಿಸಿಕೊಟ್ಟು ,ನಾವು  ತಿಂಡಿ ತಿನ್ನುವಾಗ  ಮೂರು ಗಂಟೆಯಾಗಿತ್ತು.
ಆದರು ನಮಗೆ ಕಿಂಚಿತ್ತು ಬೇಸರವಾಗಲಿಲ್ಲ ಬದಲಾಗಿ ಏನೋ ಒಂದು ರೀತಿಯ ಆತ್ಮತೃಪ್ತಿ, ಸಮಾಧಾನ,
ಸಂತೋಷವಾಗಿತ್ತು.ಸಂತೃಪ್ತಿಯಿಂದ ಮನತುಂಬಿದಂತಿತ್ತು. ಇಂತಹಾ ಅನುಭವ ಸಾಮಾನ್ಯವಾಗಿ
ಎಲ್ಲರಿಗೂ ಆಗುವಂತಹದ್ದೆ.ಅಂತಹ ಆನಂದ ಅಪರಿಮಿತವಾದದ್ದು.  ಹಾಗೆ ಮನೆಗೆ ಹಣ್ಣನ್ನು ತಂದಾಗ ಅಕ್ಕ ಪಕ್ಕ 
ದವರಿಗೆಲ್ಲ ಕೊಟ್ಟು ನಾವು ತಿನ್ನುವುದರ ಆನಂದವೇ ಪರಮಾನಂದವಾದದ್ದು.ಅಲ್ಲವೇ ....! ಸಡಗರಸಂಭ್ರಮವನ್ನು ಹಂಚಿಕೊಳ್ಳುವುದು ಎಂತಹ ಆನಂದ. ಅಲ್ಲ,ಪರಮಾನಂದ.ಎಲ್ಲರ ಜೀವನದಲ್ಲೂ ಇಂತಹಾ ಕ್ಷಣಗಳು ಸಾವಿರಾರು 
ಘಟಿಸುತ್ತಲೇ ಇರುತ್ತವೆ.ಇಂಥವುಗಳಿಂದ ನಾವು ವಂಚಿತರಾಗಬಾರದಲ್ಲವೇ..........   
"ನಮ್ಮ "ಸಂಗೀತ ಸಾಮ್ರಾಟ,  ಹಂಸಲೆಖರವರೆ, ನೋಡಿ ಅವರ  
ಅದ್ಭುತವಾದ ರಚನೆಗಳಲ್ಲಿ  ಒಂದಾದ ಗೀತೆಯಲ್ಲಿ ,

ಒಳ್ಳೆ ಕ್ಷಣಗಳ ಕೂಡಿಡಬೇಕು...
ಬದುಕಿನ ನೆನಪಿಗೆ....., ಋತುಗಳ ಜೂಟಾಟಕೆ..
ಸೊಗಸಿನಿಂದಲೇ ಸೊಗಸಾ ಸವಿಯುವಾ..
ಸೊಗಸಿಗೆ ... ಚೆಲುವಿನ... ಸೊಗಸಿದೇ...
ಎಂತಹಾ ಸುಂದರವಾದ ಸಾಲುಗಳು.. 
ಎಂತಹಾ ಅರ್ಥಪೂರ್ಣ ಸಾಹಿತ್ಯವನ್ನು ನಮ್ಮೊಂದಿಗೆ ಹಂಚಿಕೊಲ್ಲುತ್ತಿಲ್ಲವೇ ..... 
ಸಾಮಾನ್ಯವಾಗಿ 
ಮನೆಯಲ್ಲಿ ಎಲ್ಲರಿಗೂ  ಊಟ  ಬಡಿಸಿ ಮುಗಿಸಿದ ನಂತರವೇ ಅಮ್ಮ ಊಟಮಾಡೋದು.ಅದು ಮಿಕ್ಕಿದ್ದರೆ.
ಇಲ್ಲಾಂದ್ರೆ ನೀರು ಕುಡಿದಾದ್ರೂಮಲಗಿ ಬಿಡ್ತಾರೆ.ಅಂದರೆ ಮನೆಯವರೆಲ್ಲ ಸಂತೃಪ್ತರಾದರೆ,ತಾನು ಸಂತೃಪ್ತ
ಳಾದಂತೆ. ಈಗೆಲ್ಲ ಒಟ್ಟಿಗೆ ಕುಳಿತು ಸಮನಾಗಿ ಹಂಚಿ ತಿನ್ನುವುದು ಸಾಮಾನ್ಯ. ಹಾಗಾಗಿ ಯಾರಿಗೂ ನೀರಲ್ಲೇ ಹೊಟ್ಟೆ ತುಂಬಿಸಿ ಕೊಳ್ಳೋ ಸಮಸ್ಯೆ ಇಲ್ಲ ಬಿಡಿ.  ಅದಕ್ಕೆ ಹೇಳೋದೇನೋ ಹಿರಿಯರು.
ಹಂಚಿ ತಿಂದವರಿಗೆ ಹಸಿವಿಲ್ಲ ಅಂತ.ಹಾಗೆ ಎಲ್ಲರೂ ಹಂಚಿ ತಿಂದೆ ಸಂತೋಷ ಪಡೊಲ್ಲ.ಮೊದಲು ತಾನುಂಡು 
ಸಂತೃಪ್ತರಾದ ನಂತರವೇ ಗಂಡ ಮಕ್ಕಳಿಗೆ ಬಡಿಸೋದು.ಅದು ಏನಾದ್ರೂ ನೆಂಟರಿಷ್ಟರು ತರೋ ವಿಶೇಷ 
ತಿಂಡಿಗಳನ್ನ ತಾವು ತಿಂದು ಮಿಕ್ಕಿದರೆ ಒಳಿದವರಿಗೆ.,ಇದು  ಇತ್ತೀಚೆಗಷ್ಟೇ ನಾನು  ಕಂಡ ವಿಶೇಷ ವಿಸ್ಮಯ.
ನೂರಕ್ಕೆ ಐದು ಭಾಗದಷ್ಟು ಇಂತಹ ಮಹಿಳೆಯರೂ ಇದ್ದಾರೆ.ಕೆಲವರಿಗೆ ಏನನ್ನೇ ಆದರು ಹಂಚಿ ತಿಂದರಷ್ಟೇತೃಪ್ತಿ.
ಅತಿಥಿಗಳಿಗಾಗಿ ರುಚಿ ರುಚಿಯಾದ ಭಕ್ಷ್ಯಭೋಜನ ಮಾಡಿ ಸತ್ಕರಿಸುವುದೇ ಆನಂದ ಮಾತ್ರವಲ್ಲ,ಪರಮಾನಂದ,
ಸಾರ್ಥಕತೆ.ಇನ್ನು ಕೆಲವರಿಗೆ ರುಚಿಯಾದದ್ದನ್ನು  ತಾವು ತಿನ್ನದೇ ಇತರರಿಗೆ ಒಣಬಡಿಸಿ,ಸಂತೃಪ್ತಿಗೊಳಿಸುವುದೇ
ಪರಮಸಂತೃಪ್ತಿ.ಇಂತಹವರಲ್ಲಿ,ನನ್ನವರೂ ಒಬ್ಬರು.ತಿನ್ನೋದಷ್ಟೇ ಅಲ್ಲ, ಅವರು ಇಷ್ಟಪಟ್ಟು ತಂದ ಯಾವುದೇ 
ವಸ್ತುವನ್ನಾಗಲಿ, ತನ್ನ ಬಂಧು ಮಿತ್ರರಿಗೆ ಕೊಟ್ಟರೆ ಸಮಾಧಾನ.ಸಧ್ಯ ನನ್ನನ್ನ  ಕೊಟ್ಟಿಲ್ಲ,ಅದೇನೋ
ನನ್ನಪುಣ್ಯ. ಅಂತಹದೇ ಗುಣ ಅವರ ಮೊಮ್ಮಗನಿಗೂ ಬಳುವಳಿಯಾಗಿ ಬಂದಿದೆ.ಏನನ್ನೇ ಕೊಟ್ಟರು ಎಲ್ಲರಿಗೂ ಹಂಚಿ ನಂತರ ತಾನು ತಿನ್ನುವುದು.
ಯಾರಾದ್ರು ಬೇಡವೆಂದು ನಿರಾಕರಿಸಿದರೆ ಅಳೋಕೆ ಶುರುಮಾಡಿಬಿಡ್ತಾನೆ. ಅವನ ಕೈಯ್ಯಲ್ಲಿದ್ದದ್ದು
ಮುಗಿದಿದ್ದಾಗ  ಕೇಳಿದರೆ, ಗುಬ್ಬಿ ತನ್ನ ಮರಿಗೆ ತನ್ನ ಬಾಯಿಯಿಂದಲೇ ಗುಟುಕು ಕೊಡುವಂತೆ,ತನ್ನ
ಬಾಯಲ್ಲಿರುವುದನ್ನೇ,  ತನ್ನಪುಟ್ಟ  ಬಾಯಿಯಿಂದಲೇ ನಮ್ಮ ಬಾಯಿಗೆ ಪುಲಕ್ ಅಂತ ತುಂಬಿ  ಬಿಡ್ತಾನೆ. 
ಮಕ್ಕಳ ಈ ಗುಣ ಎಷ್ಟು ಮುದ ಕೊಡುತ್ತದಲ್ಲ.........!

ಶ್ರೀ  ಮಂಜುನಾಥ  ಚಿತ್ರದ,ಅಂತಃಕರಣ ಕಲಕುವ ಗೀತೆಯಲ್ಲಿ ,.........


ಹೃದಯದ ನೋವನ್ನು ಪ್ರೀತಿಯ ಸುಧೆಮಾಡಿ

ನಾಲ್ವರ ನಗಿಸುವುದೇ ಮನುಜಾನಂದ ,

ತಾಯಿ ತಂದ ಜನ್ಮದಿಂದ ಜಗದಾನಂದ ,

ಗುರುವು ತಂದ ಪುಣ್ಯದಿಂದ ಜನುಮಾನಂದ...ಜನುಮಾನಂದ ......

ರಚನಕಾರನಿಗೆ ಸಾವಿರ ನಮನ    

ಕೇವಲ ತಿನ್ನುವುದಕ್ಕಷ್ಟೇ
ಈ ಹಂಚಿಕೊಳ್ಳುವುದು ಸೀಮಿತವಾಗಿರದೆ, ಅನೇಕ ಸಾಧು ಸಂತರು, ದಾಸವರೇಣ್ಯರು,ಮಹಾನ್ಸಾಧಕರು, ಕವಿಗಳು,ಸಾಹಿತಿಗಳು  ತಮ್ಮ ಅನುಭವದ ಸಾರಾಮೃತವನ್ನು ಸಕಲರಿಗೂ ಹಂಚಿ ಕೃತ ಕೃತ್ಯ ರಾಗಿದ್ದಾರೆ.
ಅದರಲ್ಲಿಯೇ ಪರಮಾನಂದರಾಗಿ ಅಮರತ್ವವನ್ನು ಪಡೆದು ಮಾನವನಲ್ಲಿಯ ಮಾನವೀಯತೆಗೆ ಮೂಲ ಪ್ರೇರಕರು,
ಪೂರಕರು ಆಗಿ ಸರ್ವರ ಆತ್ಮಗಳಲ್ಲು ನೆಲೆಗೊಂಡಿದ್ದಾರೆ.ಅಷ್ಟೇ ಏಕೆ ನಮ್ಮ ಬ್ಲಾಗ್ ಲೋಕದಲ್ಲಿಯೇ ತಮ್ಮ ಅದ್ಭುತ 
ಪ್ರತಿಭೆ, ಸೇವಾ ಮನೋಭಾವ,  ಅನುಭವ,ಅಭಿಪ್ರಾಯಗಳನ್ನು ,ಹಂಚಿಕೊಂಡು ಆನಂದಿಸುತ್ತಿಲ್ಲವೇ.  ಹಂಚಿ ತಿಂದು
ಆನಂದಿಸುತ್ತಿರುವುದಕ್ಕೆ ಇದಕ್ಕಿಂತಲೂ ಉತ್ತಮ ಉದಾಹರಣೆ ಬೇರೊಂದು ಇರಲಿಕ್ಕಿಲ್ಲ  ಎಂಬುದು ನನ್ನ ಅಭಿಪ್ರಾಯ.
  ಇದಕ್ಕೆ  ನಿಮ್ಮ ಅಭಿಮತ .....................?                                                                                                            

Feb 8, 2011

ನಾನು ಯಾರು ....?...!




ಆಟವಾಡಲು ಅರಿತಾಗಿನಿಂದಲೂ  
ತವಕಿಸುತಿತ್ತು , ಅರಿಯಲು 
ನಾ ಯಾರೆಂದು. 


ಆಟದಲಿ ಮರೆತಂತಿದ್ದರು,  
 ದುತ್ತನೆ ಎದ್ದು ಕಾಡುತ್ತಿತ್ತು,  
ನನ್ನೊಳಗಿನ ಪ್ರಶ್ನೆ...
ನಾನು ಯಾರು ...? ...!....ಎಂದು


ಕೈಕಾಲು ಮೊಗವಿದೆ ,
ಮಾಂಸದ ಮುದ್ದೆಗೊಂದು 
ಆಕಾರವಿದೆ. 
ಚಲಿಸುವೆ ,ಆಲಿಸುವೆ, 
ಆಡುವೆ, ಮಾತನಾಡುವೆ.
ಆದರು, ನಾನು ಯಾರು..? 


ಇಹರು ಇಹದಲಿ 
ನನ್ನಂತೆ ಎಲ್ಲರೂ...!
ಮಾಂಸದ ಮುದ್ದೆಗಳ
ಯಂತ್ರಗಳಂತೆ. 


ಒಂದರಂತೆ ಇನ್ನೊಂದಿಲ್ಲ. 
ಇನ್ನೊಂದರಂತೆ
ಮತ್ತೊಂದಿಲ್ಲ.ಎಲ್ಲವೂ  
ವಿಭಿನ್ನ ...!ನನ್ನಂತೆ ಎಲ್ಲವೂ
ಪ್ರತಿಕ್ರಿಯಿಸುವವು..!
ಯಾರು ಇವರೆಲ್ಲ......?
ಹೇಗಾದರೂ....?.....!


 ಪ್ರಶ್ನಿಸಲು ಹೊರಟರೆ 
ಎನೆನ್ನುವರೋ... 
ಎಳವೆಯಲ್ಲಿ ಬಾಲಿಶವಾಗಿ 
ಕಾಡಿದ ಪ್ರಶ್ನೆಗೆ,
ಉತ್ತರ ಕೇಳುವ ಮನವಿಲ್ಲ.


ಅವರಿವರು ಮಾತನಾಡಿ 
ಕೊಳ್ಳುವುದಿತ್ತು.
ಅದೇನೋ ಪಂಚೆಂದ್ರಿಯಗಳಂತೆ,
ಅವನಾರೋ ಬ್ರಹ್ಮನಂತೆ.
ಅವನೇ ಸೃಷ್ಟಿಕರ್ತನಂತೆ...!


ಹೆಣ್ಣ ಗರ್ಭದಲಿ ಹೆಪ್ಪುಗಟ್ಟಿದ 
ನೆತ್ತರಿಗೆ ಅಂಗಗಳು ಮೂಡಿ,
ನವಮಾಸ ಹೊತ್ತು,
ಹೆರುವಳಂತೆ ,
ಸೃಷ್ಟಿಕರ್ತ ಬ್ರಹ್ಮನನೂ 
ಅವಳೇ ಹಡೆದಳಂತೆ....!


ಚಿತ್ರ ವಿಚಿತ್ರ ಭಾವಗಳು  
ಮಾಂಸದ ಮುದ್ದೆಯೊಳಗೆ
 ಬಿದ್ದು ಗೊಂದಲಮಯವಾಗಿತ್ತು.
ಪ್ರಶ್ನೆಯಾಗೇ ಉಳಿದಿತ್ತು  
ಅಂದು......!.


ಸೃಷ್ಟಿಯ ನಿಯಮದಿ ,
ಪ್ರಕೃತಿ ಪುರುಷರ  
ಒಲವಿನ ಮಿಲನದಿ  
ಒಲಿಯುವ  ಚೆಲುವಿನ 
ಚಿಗುರದು  ಹೊಳೆವುದು.


ಬದುಕಿನ ಬಗಲಿನ
   ಹರಯದ ತಿರುವಲಿ  
ಬಾಲಿಶ ಭಾವದ 
ಪುಟಗಳು   ಮರಳಿ 
          ಕಾವ್ಯಕೆ ಇಬ್ಬನಿಯಾಗಿತ್ತು.              

Jan 25, 2011

     ಕುತಂತ್ರಗಳಿಂದ 
    ಅತಂತ್ರವಾಗದಿರಲಿ
        ಸ್ವಾತಂತ್ರ್ಯ ,
ಸರ್ವರಿಗೂ ಗಣರಾಜ್ಯೋತ್ಸವದ ಶುಭಾಶಯಗಳು.
 

   ದೇವರು ದೈಹಿಕವಾಗಿ ಎಲ್ಲಾ ಅಂಗಾಂಗಗಳನ್ನೂ  ಆರೋಗ್ಯ ಪೂರ್ಣವಾಗಿಟ್ಟಿದ್ದರು ಪ್ರತಿಯೊಂದಕ್ಕೂ ಮಾರ್ಗದರ್ಶಕರು
ಹಿಂದೆಯೇ ಇರಬೇಕಾಗುವುದು.ಅವರಿಗೆ ಧೈರ್ಯ ,ಸ್ಥೈರ್ಯ,ಸ್ವಾವಲಂಬನೆ,ಸ್ವಾಭಿಮಾನ ಇವುಗಳನ್ನು ರೂಢಿಸಿಕೊಳ್ಳಲು
ಆತ್ಮವಿಶ್ವಾಸವನ್ನುತುಂಬಲು  ಎಷ್ಟೆಲ್ಲಾ ಸರ್ಕಸ್ ಮಾಡುತ್ತೇವೆ. ಆದರೆ ಅಂಗವಿಕಲರಿಗೆ ಆತ್ಮವಿಶ್ವಾಸ  ಹುಟ್ಟಿನಿಂದಲೇ
ಬಳುವಳಿಯಾಗಿ ಬಂದಿರುವುದಲ್ಲದೇ ನಾವು ಏನನ್ನಾದರೂ ಸಾದಿಸಲೇಬೇಕೆಂಬ ಆಕಾಂಕ್ಷೆ ಗುರಿಯನ್ನು ಹೊಂದಿರುತ್ತಾರೆ.
  
     ಬೆಂಗಳೂರು ಎಷ್ಟುಜನಜಂಗುಳಿ,ಟ್ರಾಫಿಕ್  ಇರುವ ಮಹಾನಗರ.ಅಂತಹ ವಾತಾವರಣದಲ್ಲೂ ಅಂಧರು
ಧೈರ್ಯದಿಂದ ಒಬ್ಬೊಬ್ಬರೇ ತಮ್ಮ ಕೆಲಸಕಾರ್ಯಗಳಿಗಾಗಿ  ಯಾರನ್ನು ಅವಲಂಬಿಸದೆ ಓಡಾಡುತ್ತಿರುತ್ತಾರೆ.
ನಾನು ಬೆಂಗಳೂರಿನಲ್ಲೇ ಇದ್ದಾಗ ಶಾಲೆಗೆ ಬಸ್ನಲ್ಲಿ ಹೋಗಿ ಬರುವಾಗ ಇಬ್ಬರು ಅಂಧರು,ಅಂದರೆ ಪತಿ ಪತ್ನಿಯರು
ಒಬ್ಬರ ಕೈ ಒಬ್ಬರು ಹಿಡಿದುಕೊಂಡು ಕೈನಲ್ಲಿ ಒಂದು ಸ್ಟಿಕ್ ಹಿಡಿದುಕೊಂಡು  ಸರಾಗವಾಗಿ ರಸ್ತೆ ದಾಟಿ ಬಸ್
ಹತ್ತುತ್ತಿದ್ದರು.ನನಗೆ ಅವರ ಶ್ರಮದ ಬದುಕನ್ನು ನೋಡಿದಾಗ ಕರುಣೆಗೆ ಬದಲಾಗಿ ಹೆಮ್ಮೆ ಎನಿಸುತ್ತಿತ್ತು. ಪ್ರತಿದಿನ
ಒಬ್ಬರಲ್ಲ ಒಬ್ಬರು  ಅಂಗವಿಕಲರನ್ನು ನೋಡಿದಾಗಲೆಲ್ಲ  ಅವರ ಬಗ್ಗೆ   ಹೆಮ್ಮೆ ಎನಿಸುವುದು .
                 
     ಬಹಳ ಹಿಂದಿನಿಂದಲೂ ಅಂತಹ ಅಂಗವಿಕಲರಿಗೆ ನನ್ನ  ಕೈಲಾದ ಸೇವೆಯನ್ನುಮಾಡುವ  ಹಂಬಲ .
ಆದರೆ ಬದುಕು ಕಟ್ಟಿಕೊಳ್ಳುವ  ಸಾಹಸದಲ್ಲೇ ಅರ್ಧ ಆಯಸ್ಸು ಮುಗಿಯಿತು.ಈಗಷ್ಟೇ  ಸ್ವಲ್ಪ ಬಿಡುವು ಸಿಕ್ಕಿದೆ.
ಆದರೆ ಆರ್ಥಿಕವಾಗಿ ಏನು ಮಾಡಲು ನನ್ನಿಂದ ಆಗದಿದ್ದರು ನನ್ನ ನೆಚ್ಚಿನ ಹವ್ಯಾಸವಾದ ಹಾಡುಗಾರಿಕೆಯನ್ನೇ
ಮಕ್ಕಳಿಗೆ ಕಲಿಸಿ. ಅವರಿಂದ ಕಾರ್ಯಕ್ರಮಗಳಲ್ಲಿ ಹಾಡಿಸುವ ಮತ್ತು ಆಕಾರ್ಯಕ್ರಮದಿಂದ ಬರುವ ಸಂಭಾವನೆ ಅಥವಾ ಗೌರವ ಧನದಿಂದ ಮಕ್ಕಳಿಗೆ ಸ್ವಲ್ಪ ಸಹಾಯವಾದರು ಆಗುವಂತೆ ಮಾಡುವುದು ನನ್ನ ಉದ್ದೇಶ ಮತ್ತು ಆಶಯ. .   

       ಈಗ ಅದಕ್ಕೆ ಸರಿಯಾದ ಕಾಲವು ಕೂಡಿ ಬಂದಂತಿತ್ತೇನೋ ಹಾಸನದಲ್ಲಿರುವ  ಕೃಷ್ಣ ಅಂಧರ  ವಸತಿ
ಶಾಲೆಗೇ ಹೋಗಿ ಅಲ್ಲಿನ ವ್ಯವಸ್ಥಾಪಕರಾದ ಡಾ.ಕೃಷ್ಣಮೂರ್ತಿಯವರನ್ನು ಭೇಟಿಮಾಡಿ ಅನುಮತಿ ಕೇಳಿದೆ."
ಯಾರಾದರು ಸಂಗೀತ ಶಿಕ್ಷಕರು ಬರುತ್ತಿದ್ದಾರೆಯೇ ?"ಎಂದು."ಇಲ್ಲ ಮೇಡಂ ,ಹಿಂದೆ ಒಬ್ಬರು ಬರ್ತಾ ಇದ್ದರು.
ಅವರಿಗೆ ಸರ್ಕಾರಿಶಾಲೆಯಲ್ಲಿ ಕೆಲಸ ಸಿಕ್ಕಿದೆ.ಈಗ ಯಾರು ಬರುತ್ತಿಲ್ಲ" ಎಂದರು.ಸರಿ  ,"ನೀವೂಅನುಮತಿ
ಕೊಟ್ಟರೆ, ನಾನು ವಾರದಲ್ಲಿ ಎರಡುದಿನ ಮಕ್ಕಳ ಬಿಡುವಿನ ವೇಳೆಯಲ್ಲಿ ಬಂದು ಮಕ್ಕಳಿಗೆ ಇಷ್ಟವಾಗುವ
ಪ್ರಕಾರವನ್ನು ಹೇಳಿಕೊಡುತ್ತೇನೆ."ಎಂದೇ.ಅದಕ್ಕೆ ಅವರು ಸಂತೋಷದಿಂದ ಒಪ್ಪಿಗೆ ಇತ್ತರು. ನಾನು
ಮಕ್ಕಳನ್ನೆಲ್ಲ ಒಮ್ಮೆ ಕೇಳಿದೆ.ಮಕ್ಕಳು ಸಂತೋಷದಿಂದ ಒಪ್ಪಿದರು.

         ಸರಿ ನಾನು ನಿಗದಿಪಡಿಸಿದ ದಿನದಿಂದ ಶಾಲೆಗೇ ಹೋಗಲು ಆರಂಬಿಸಿದೆ.  ಶಾಲೆಯ ಗೇಟಿನ ಬಳಿ
ಹೋಗುತ್ತಿದ್ದಂತೆ  "ಸಂಗೀತ ಮೇಡಂ ಬಂದರು" ಎಂದು ಅಕ್ಕರೆಯಿಂದ ಎಲ್ಲಾ ಮಕ್ಕಳು ಓಡಿ ಬಂದು ಸುತ್ತುಗಟ್ಟಿ
ಪ್ರೀತಿಯಿಂದ ಕೈ ಹಿಡಿದುಕೊಳ್ಳುತ್ತಿದ್ದರು.ಅಲ್ಲಿ  ಐದನೇ ತರಗತಿ ಓದುತಿದ್ದ ರಮೇಶ್ಗೆ ತಬಲಾ ಬಾರಿಸುವು
ದೆಂದರೆ ತುಂಬಾ ಇಷ್ಟ ಮತ್ತು ಒಳ್ಳೆಯ ಹಾಡುಗಾರ ಕೂಡ.ಅಲ್ಲಿ ಆರು ಏಳು ಮಕ್ಕಳಿಗೆ ಹಾಡುವ ಆಸಕ್ತಿ.
ಹೇಳಿಕೊಟ್ಟಿದ್ದನ್ನು ಬಹಳ ಬೇಗನೆ ಕಲಿಯುವರು.ಅವರಿಂದಲೇ ಅವರು ಕಲಿತಿರುವ ಹಾಡನ್ನು ಹಾಡಿಸುತ್ತಿದ್ದೆ.
ಬಹಳ ಸುಶ್ರಾವ್ಯವಾಗಿ ಹಾಡುವರು.ಮಕ್ಕಳಿಗೆ ಕಾರ್ಯಕ್ರಮದಲ್ಲಿ ಹಾಡಿಸುವ ಮೂಲಕ ಮಕ್ಕಳಲ್ಲಿರುವ
ಪ್ರತಿಭೆಯನ್ನು ಪ್ರೋತ್ಸಾಹಿಸುವುದು, ಉತ್ತೇಜಿಸುವುದು  ನನ್ನ ಮುಖ್ಯ ಉದ್ದೇಶವಾಗಿತ್ತು.

     ಹಾಸನದಲ್ಲಿ ಪ್ರತಿತಿಂಗಳು ಮೊದಲ ಭಾನುವಾರದಂದು ಮನೆಮನೆ ಕವಿಗೋಷ್ಠಿ ಏರ್ಪಡಿಸಿರುತ್ತಾರೆ. ಅಲ್ಲಿ ಯಾವುದೇ ತಾರತಮ್ಯವಿಲ್ಲದೆ ಉದಯೋನ್ಮುಖರಿಂದ ಪ್ರಬುದ್ಧ ಖ್ಯಾತ ಸಾಹಿತಿಗಳವರೆಗೆ ಮುಕ್ತ  ವೇದಿಕೆಯ
ಅವಕಾಶವಿದೆ.ಅಲ್ಲಿ ನಡೆಯುತ್ತಿರುವ ಸಾಹಿತ್ಯಿಕ ಚಟುವಟಿಕೆಯ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೂ
ಪ್ರ್ರಮುಖ್ಯತೆ ಕೊಡಲಾಗುವುದು. ಅಲ್ಲಿನ ಪ್ರಸ್ತುತ ಸಂಚಾಲಕರಾದ ಸತ್ಯನಾರಾಯಣರವರನ್ನು ಮತ್ತು
ಏನ್.ಎಲ್.ಚನ್ನೇಗೌಡರವರಲ್ಲಿ ನನ್ನ  ಉದ್ದೇಶದ ಪ್ರಸ್ತಾಪವನ್ನಿರಿಸಿದೆ. ಅವರು ಸಹ ಖಂಡಿತ ಮಾಡಿಸಿ
ಮೇಡಂ ,ಎಂದರು .ಹಾಗೆ . "ನಮ್ಮ ಕವಿಗೋಷ್ಠಿಯಲ್ಲಿ ವಾಚಿಸುವ  ಕವನಗಳನ್ನು  ರಾಗ ಸಂಯೋಜನೆ ಮಾಡಿಸಿ
ಹಾಡಿಸಿ."ಎಂದು  ಸಲಹೆಯನ್ನು ಕೊಟ್ಟರು.ಅದನ್ನು ಕೇಳಿ ನನಗೆ ನನ್ನ  ಪ್ರಯತ್ನಕ್ಕೆ ರೆಕ್ಕೆ ಮೂಡಿದಂತೆ ಆಯಿತು.
ಖಂಡಿತ ಸರ್ ಎಂದು ಹೇಳಿ.ಮಕ್ಕಳಿಗೆ ವಿಷಯ ತಿಳಿಸಿದಾಗ ಸಂಭ್ರಮದಿಂದ ಕುಣಿದಾಡಿದರು.
ನನಗೆ ಆಮಕ್ಕಳ ಒಡನಾಟವೇ ಆತ್ಮಿಯವೆನಿಸುತ್ತಿತ್ತು. ಅವರಲ್ಲಿ ಯಾವುದೇ ರೀತಿಯ ಭೇದಭಾವವಾಗಲಿ,
ತಾರತಮ್ಯವಾಗಲಿ, ಕಿಂಚಿತ್ತು ಇಲ್ಲದೆ ಅಲ್ಲಿಸೋದರತ್ವ,ಸ್ನೇಹದಿಂದ ಕೂಡಿ  ಆಡಿ ,ಹಾಡಿ ಕಲಿಯುವರು.    
ಒಂದೇ ತಾಯಿಯ ಮಕ್ಕಳಾದವರೆ ಅಷ್ಟು ಹೊಂದಾಣಿಕೆಯಿಂದ ಇರಲು ಅಸಾಧ್ಯವಾಗಿರುವಾಗ.ಎಲ್ಲೆಲ್ಲಿಂದ
ಬಂದವರೋ ಒಟ್ಟಾಗಿ ಕಲೆತು ಸಹಬಾಳ್ವೆಯಿಂದ ಇರುವ ಆಮಕ್ಕಳನ್ನು ನೋಡಿ ನಾವು ಕಲಿಯಬೇಕಿದೆ
ಎನಿಸುವುದು.ಅಂತಹ ವಾತಾವರಣದಲ್ಲಿ ಮುಗ್ಧ ಮಕ್ಕಳಿಗೆ ಕಲಿಸುವ ಸುಯೋಗ ನನ್ನ ಪಾಲಿನ ಸೌಭಾಗ್ಯವೇ
ಸರಿ. ನಂತರ  ನಾಲ್ಕೈದು ದಿನಗಳಷ್ಟೇ   ನಾನು ಹೇಳಿಕೊಟ್ಟಿದ್ದು. ಮಧ್ಯದಲ್ಲೇ ನಾನು ಏನೋ ಕೆಲಸದ ನಿಮ್ಮಿತ್ತ
ಬೆಂಗಳೂರಿಗೆ ಹೋಗಬೇಕಾಗಿ ಬಂದದ್ದರಿಂದ ,ಮಕ್ಕಳಿಗೆ ಹೇಳಿ ಹೊರಟೆ "ನಾನು ಬರುವಷ್ಟರಲ್ಲಿ ಚೆನ್ನಾಗಿ ಕಲಿತು
ಹಾಡಿದರೆ ,ಮುಂದೆ ಇನ್ನು ಬೇರೆ ಬೇರೆ ಕಾರ್ಯಕ್ರಮಕ್ಕೂ ಹಾಡುವ ಅವಕಾಶಗಳು ಸಿಗುತ್ತವೆ ಮಕ್ಕಳೇ .
ನೋಡೋಣ ನೀವು ಹೇಗೆ ಅಭ್ಯಾಸ ಮಾಡಿರುತ್ತೀರಿ",ಎಂದು ಹೇಳಿ ಹೊರಟೆ.ಮಕ್ಕಳು ಬಹಳ ಉತ್ಸಾಹದಿಂದ
ಒಪ್ಪಿ  ಚೆನ್ನಾಗೆ ಅಭ್ಯಾಸ ಮಾಡಿದ್ದರು. ನಾನು ಕಾರ್ಯಕ್ರಮಕ್ಕೆ ಹೊರಡಲು ಒಂದು ಗಂಟೆ ಮುಂಚಿತವಾಗೆ
ಮಕ್ಕಳನ್ನು ಕರೆದೊಯ್ಯಲು ಹೋಗಿದ್ದೆ.ಆದರೆ ಮಕ್ಕಳು ಇನ್ನು  ಸಂಭ್ರಮದಿಂದ ಹೊರಡಲು ಸಿದ್ದತೆಯಲ್ಲಿದ್ದರು.
ಅವರ ಸಡಗರ ನೋಡಿ ನನ್ನ ಪ್ರಯತ್ನ ಸಾರ್ಥಕವಾಯಿತು ಎನಿಸಿತು. ಶುಭ್ರವಾಗಿ ಸ್ನಾನ ಮಾಡಿ,ತಲೆ
ಬಾಚಿಕೊಂಡು ಶುಭ್ರವಾದ ಬಣ್ಣಬಣ್ಣದ ಚೂಡಿದಾರ್,ಗಾಗರ ಧರಿಸಿ ,ಮುಖಕ್ಕೆ,ಸ್ನೋ ಪೌಡರ್ ಹಾಕಿಕೊಂಡು
ಶ್ರದ್ದೆ ಆಸಕ್ತಿಯಿಂದ  ಸುಂದರವಾಗಿ ಅಲಂಕರಿಸಿಕೊಂಡು ಸಂಭ್ರಮದಿಂದ ಹೊರಟ ಮಕ್ಕಳನ್ನುನೋಡಿ
ಇವರು ಅಂಧರೆ,ಅಂಗವಿಕಲರೇ ಎಂದು ನಮ್ಮ ಕಣ್ಣನ್ನು ನಾವೇ ನಂಬಲಾರದಷ್ಟು ಅಚ್ಚರಿಯಾಯಿತು.ಅವರ ಆಸಕ್ತಿಗೆ
ಹೃದಯತುಂಬಿ ಬಂದಿತು. ಕಾರ್ಯಕ್ರಮದಲ್ಲಿ ಶುಶ್ರಾವ್ಯವಾಗಿ ಹಾಡಿದರು ಎಲ್ಲರೂ ಮೆಚ್ಚುಗೆಯಿಂದ ಶ್ಲಾಘಿಸಿದರು.
ಅಲ್ಲಿ ಕವಿ ಗೋಷ್ಠಿಯಲ್ಲಿ ಭಾಗವಹಿಸಲು ಬಂದಿದ್ದ ಉಪನ್ಯಾಸಕರಾದ ಅಪ್ಪಾಜಿಗೌಡರು ಶ್ಲಾಘಿಸಿ "ಮತ್ತೇ ಎಲ್ಲಾದರು
ಕಾರ್ಯಕ್ರಮವಿದ್ದಾಗ  ನನಗೆ ತಿಳಿಸಿ ನನ್ನಿಂದಾದದ್ದನ್ನು ನಾನು ಮಾಡುತ್ತೇನೆ" ಎಂದರು.ಅದಕ್ಕೆ ಖಂಡಿತ ತಿಳಿಸುತ್ತೇನೆ.
ಎಂದುಹೇಳಿ ,ಮಕ್ಕಳನ್ನು ಸುರಕ್ಷತೆಯಿಂದ ಅವರವಸತಿಗೆ ತಲುಪಿಸುವವ್ಯವಸ್ಥೆ ಮಾಡಿ.ಮನೆಗೆ ಹಿಂತಿರುಗಿದೆ.

         ಇದನ್ನ ಎಲ್ಲಾ ಮಕ್ಕಳು ಮಾಡುತ್ತಾರೆ.ಇದರಲ್ಲೇನು ವಿಶೇಷತೆ ಎನ್ನುವಿರಾ ? ಅದು ಸಹಜವೇ .ಆದರೆ ಆ
ಮಕ್ಕಳ  ಸಂಭ್ರಮ ,ಸಂತಸದಿಂದ ಅರಳಿದ ನಗುವಿಗೆ ನನ್ನ ಸಮಯ ಸದುಪಯೋಗವಾಯಿತಲ್ಲ,ಎನುವ ಸಂತೃಪ್ತಿ.
ಸಾರ್ಥಕ್ಯ ಭಾವವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ  ಹಂಬಲ..ಆಮಕ್ಕಳ ಸಹಬಾಳ್ವೆಯೇ ನಮಗೊಂದು
ಸಂದೇಶವಾಗುವುದು.ಆದರ್ಶವಾಗುವುದು.  ಆ ಮಕ್ಕಳ ಒಡನಾಟದಲ್ಲಿ ಅವರ ಒಡಲಾಳವನ್ನು ಕವನದ ರೂಪದಲ್ಲಿ
ಹಿಡಿದಿಡುವ ಪ್ರಯತ್ನ ಮಾಡಿದ್ದೇನೆ....

ಅಂಗಊನವಾದರೇನು ಆಸೆ ಉಜ್ವಲ 
ಆತ್ಮವಿಶ್ವಾಸವೇ..  ನಮ್ಮ  ಬಲ! 

ಮತಭ್ರಾಂತಿಯಿಂದ  ಅಂಧರಾದ ನಿಮಗೆ  
ಜ್ನಾನದೀವಿಗೆಯ ನಾವು ಹಿಡಿವೆವು ಬನ್ನಿ
ಸ್ನೇಹ ಸಂಬಂಧ ಮರೆತು ಬಾಧೆ ಪಡುವಿರೆಲ್ಲ
ಸೋದರತೆಯ ನಾವು ಮೆರೆಸುವೆವು ಬನ್ನಿ


ಬೇಧ ಭಾವ ತೊರೆದು ಬಾಂಧವ್ಯದಿ ಬೆರೆತು 

ವೈಚಾರಿಕ ಭಾವಲಹರಿಗಳಲಿ ಮೀಯಬನ್ನಿ.  

ಸಮಾನತೆಯ ಸವಿಯನು ಸವಿಯುವ ಬನ್ನಿ


ಸ್ವಾಭಿಮಾನ ಸ್ವಾವಲಂಬಿ ಬದುಕೇ ನಮ್ಮ ಗುರೀ

       ಮೂಢರಾಗಿ ಮೌಲ್ಯಗಳನು ಮಾರಿಕೊಳ್ಳದಿರೀ     
 
ಸೌಹಾರ್ಧತೆಗೆ ಆತ್ಮ ಊನವಾಗದಿರಲಿ

       ಸಂಸ್ಕೃತಿಯ ಸಾಕಾರಕೆ ಹರಿಕಾರರೆನ್ನಿ......
*************
 
ತದನಂತರ  ವಿದೇಶ ಪ್ರವಾಸಕ್ಕಾಗಿ ಹೊರಟಿದ್ದರಿಂದ ಮಕ್ಕಳಿಗೆ ಹೇಳಿಯೇ ಹೊರಟಿದ್ದೆ .
 ಇಲ್ಲಿಯವರೆವಿಗೂ ಶಾಲೆಯ ಕಡೆ ಹೋಗಲು ಸಾಧ್ಯವಾಗಿರಲಿಲ್ಲ.ನನ್ನ ಮನಸ್ಸು ಆ ಮಕ್ಕಳತ್ತಲೇ ಸೆಳೆಯುತ್ತಿದೆ.
ಇನ್ನು ಮುಂದೆ ನನ್ನ ಅಚ್ಚುಮೆಚ್ಚಿನ ಕೆಲಸವನ್ನು ಮುಂದುವರೆಸುತ್ತೇನೆ.
  

Jan 14, 2011

                    ಎಲ್ಲರಿಗೂ " ಹೊಸ ವರ್ಷದ  
            "ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯ"
      
                          ಬೆಳಕಿನಾ    ಬೀಜಗಳು
******************************* 

ಎಳ್ಳು ಕೊಬ್ಬರಿ  ಬೆಲ್ಲ

ಕಡಲೆ  ಪಪ್ಪು ಗಳೆಲ್ಲ

ಬೆರೆತು ಸವಿ ರುಚಿಯಾಗಿ

ಪ್ರೀತಿಯ  ರಸಾಸ್ವಾದದಲಿ


ಬೆಲೆಕಟ್ಟ ಲಾಗದ ಯೋಗಿಯ

ಬೆವರ  ಹನಿಗಳ ತೆನೆಯು   

ಮಾತೆ ಎದೆ  ಕಣದಲ್ಲಿ

ವಿವಿಧ ಧಾನ್ಯಗಳ  ರಾಶಿಯಾಗಿ  


ಶ್ರಮದ ಫಲ ಸಮೃದ್ಧ

ಸುಗ್ಗಿ ಸಂಭ್ರಮವಿಂದು

ಜೀವಧಾತನಿಗೆಂದೂ  

ಧನ್ಯತೆಯ ನಮನ



ಎದೆಯೊಳಗೆ ಮೊಳೆಯುವಾ

ಬೆಳಕಿನಾ ಬೀಜಗಳು

ಸಸಿಯಾಗಿ ಸೃಷ್ಟಿ

ಸಂಭ್ರಮದಲಿ


ಬೆಳಗಲಿದೆ  ನಾಳೆಗಳು   

ಸುಫಲ ಪಾದಪವಾಗಿ,

ಹದಗೊಳಲಿ

ಅದಕಾಗಿ ನಮ್ಮೆದೆಗಳು
                                                              
                                                  ***************             

Jan 8, 2011

ನಯಾಗರೆಯ ಅನುಭವ ಕಥನ

ನ್ಯೂಯಾರ್ಕ್ ನ  ನಯಾಗರ ಜಲಪಾತ







                                       
ನ್ಯೂಯಾರ್ಕ್ ನ  ನಯಾಗರೇ


ನ್ಯೂಯಾರ್ಕ್ನಿಂದ 
ನಯಾಗರ ಫಾಲ್ಸ್ ಗೆ ಹೋಗಲು  ಸುಮಾರು ೬ ಗಂಟೆಗಳು ಕ್ರಮಿಸಬೇಕಾಗುವುದು. ನಮ್ಮ ಮಗಳ ಮನೆ ಕಾರ್ನಿಂಗ್ ನಲ್ಲಿ.
ಹಾಗಾಗಿ ನಾವು ಕಾರ್ನಿಂಗ್ನಿಂದ ೩ ಗಂಟೆಪ್ರಯಾಣ ಮಾಡಿ  
ಬಫೆಲೋ ತಲಪಿದೆವು.ಅಲ್ಲಿಂದ ಮುಂದೆ  ಎಡಭಾಗಕ್ಕೆ ಅರ್ಧ ಗಂಟೆ ಕ್ರಮಿಸಿದಾಗ 
ಬಹಳ ದೊಡ್ಡದು 
ಹಾಗೂ ಸುಂದರವಾದ ನಯಾಗರ ನದಿಗೆ 
ನಿರ್ಮಿಸಿರುವ ಸೇತುವೆ.ಕಾರಿನಲ್ಲೇ ಕುಳಿತು ಸೊಬಗಿನ ಸೇತುವೆಯ
ಛಾಯಾಚಿತ್ರವನ್ನು ಸೆರೆ ಹಿಡಿಯುತ್ತಲೇ ಸಾಗಿದೆ ವು. ಅಲ್ಲಿಂದ ಮುಂದೆ ಕಾರ್ 
ಪಾರ್ಕಿಂಗ್ 
ಸ್ಥಳವನ್ನು ಸಮೀಪಿಸುತ್ತಿದ್ದಂತೆ
ಬಿಳಿ ಎಳ್ಳು ಎರೆಚಿದಂತೆ ಬೆಳಗ್ಗೆ ಹತ್ತರ 
ಸಮಯದಲ್ಲಿ ಬೀಳುವಬಿಸಿಲಲ್ಲಿ ಮಳೆಹನಿ ಮುಖಕ್ಕೆ ಮಂತ್ರಾಕ್ಷತೆಯಂತೆ 
ಪ್ರೋಕ್ಷಿಸುತ್ತಾ ಸ್ವಾಗತಿಸಿತು.
ಆದರೆ ಅಲ್ಲಿ ಸಮಯ ಮಧ್ಯಾಹ್ನ ೩ ಗಂಟೆ.  ಅರೆ ಏನಿದು ಇದ್ದ
ಕ್ಕಿದ್ದಂತೆ ಬಿಸಿಲಲ್ಲಿ ಮಳೆ ಹನಿಯಾಗುತ್ತಿದೆಯಲ್ಲಾ..! 
ಎಂದುಕೊಂಡೆ ಸಾಗಿ  ಕಾರ್ ರ್ಪಾರ್ಕ್ ಮಾಡಿ
ಇಳಿದೆವು. ಆಹಾ... ಶುರುವಾಯಿತು 
ನೋಡಿ..ಕೈ ಬಿಡಲಾಗದಷ್ಟು ಕುಳಿರ್ಗಾಳಿ, ಛಳಿಛಳಿ.  ಮುಂದೆ ಹೋಗುತ್ತಾ ಇನ್ನು ಛಳಿ ಹೆಚ್ಚುತ್ತಲೇ ಹೋಯಿತು. ಜೊತೆಗೆ ಮುಖಕ್ಕೆ ಚಿಟಿಚಿಟಿ ಪಟಪಟನೆ ರಾಚುವ ಮಳೆಹನಿ.ಮುಖಕ್ಕೆ ಕೈ ಅಡ್ಡಗಟ್ಟ ಬೇಕು.
ಕಟ್ಟಿದ ಕೈ ಬಿಟ್ಟರೆ 
ನಡುಗಿಸುವ ಛಳಿ.ವಿಧಿ ಇಲ್ಲ. ಆದರೆ ಸ್ವಲ್ಪ ಹಿಂದೆಯೇ ಒಂದೆಡೆ ಮುಖ ಮುಚ್ಚುವಂತೆ ಪಾರದರ್ಶಕವಾದ ಮುಸುಕಿರುವ
ಬೆಚ್ಚನೆಯ ಕೋಟ್ ಮಾರಾಟ ಮಾಡುತ್ತಿದ್ದರೂ ಅದರ  ಅವಶ್ಯಕತೆ ಇರುವುದಿಲ್ಲವೆಂದುಕೊಂಡು 
ಅಲಕ್ಷ್ಯ ಮಾಡಿ ಬಂದಿದ್ದೆವು. ಜೊತೆಗೆ ಸ್ವೆಟ್ಟರ್ ಗಳನ್ನೂ ತಂದಿರಲಿಲ್ಲ. ನನಗಂತೂ ಛಳಿ ತಡೆಯಲಾಗದೆ ನನ್ನ ಮಗಳ ಶಾರ್ಟ್ ಕೊಟನ್ನೇ  ಹಾಕಿಕೊಂಡೆ. ಆದರೆ ಅಷ್ಟೊಂದು ರಾಚಿ ಹೊಡೆಯುತ್ತಿರುವುದು ಮಳೆಹನಿಯಲ್ಲ....!
ನಯಾಗರೇ ಮೇಲಿನಿಂದ ಧುಮ್ಮಿಕ್ಕುವ ರಭಸಕ್ಕೆ ಮೇಲಕ್ಕೆ ಹೊಮ್ಮಿ 
ಚಿಮ್ಮುವ ಹನಿಗಳೆಂದುತಿಳಿದು ಅಚ್ಚರಿಯಾಯಿತು. ಸುಮಾರು ಒಂದು 
ಕಿಲೋಮೀಟರ್ ದೂರದಿಂದಲೇ ಮಂತ್ರಾಕ್ಷತೆಯಂತೆ ತುಂತುರು 
ಹನಿಗಳನ್ನು ಪ್ರೋಕ್ಷಿಸುತ್ತ,ಗಡಗಡ  ನಡುಗಿಸುತ್ತಲೇ ತನ್ನೆಡೆಗೆ ಸ್ವಾಗತಿಸುವ  
ನಯಾಗರ  ಜಲಪಾತದ ವೈಖರಿ 
ವಿಸ್ಮಿತವೆನಿಸಿತು.
ಹಸಿರು ವನರಾಶಿಯಿಂದ ತಬ್ಬಿದ ವಿಶಾಲವಾದ ಜಲರಾಶಿ ಶಾಂತವಾಗಿ ಹರಿಯುತ್ತಾ ಪಾತಾಳಕ್ಕೆ ಧುಮ್ಮಿಕ್ಕಿ  ಭೋರ್ಗರೆದು ಮೇಲೆ ಚಿಮ್ಮಿ ನೊರೆನೊರೆಯಾಗಿ ಹಾಲ ಹೊಳೆಯಂತೆ ಹರಿಯುವ 
ನಯಾಗರೆಯ ಸೊಬಗು ರಮ್ಯ ಮನೋಹರ.  ಆಚಿನ ದಡವನ್ನು ಹಸಿರಿನಿಂದ ತಬ್ಬಿದ ಕೆನಡಾ. ಕೆನಡಾದ ರೊಟೆಟ್ ರೆಷ್ಟೊರೆಂಟ್ ಸುಂದರ ದೃಶ್ಯವನ್ನು 
ಇಚೆಯ ದಡದಲ್ಲೇ ನಿಂತು ಕಾಣಬಹುದು.ಸಂಜೆ ಮೂರರ ಸಮಯ ಮೋಡ  
ಕವಿದು ಕತ್ತಲಾದಂತೆ.
ಕ್ಷಣದಲ್ಲೇ ಮುಂಜಾವಿನ ಅರುಣೋದಯದ ಬೆಚ್ಚನೆಯ ಹೊದಿಕೆ ಹೊದಿಸಿದಂತೆ ಎಳೆಬಿಸಿಲ ಕಿರಣಗಳು ಹೊಮ್ಮಿ ಚಿಮ್ಮುವ  
ಹನಿಗಳ  
ತುಂತುರಿನೊಡನೆ ಮೋಹಕವಾದ ಕಾಮನಬಿಲ್ಲು ಕಣ್ಮನ ಸೆಳೆದು ಪರವಶಗೊಳಿಸುತ್ತಿದ್ದಿತು. 
  ದಡದ ಹಸಿರ ಹಾಸಿನಲ್ಲೇ ಹಾಗೇ ವಿರಮಿಸ ಬೇಕೆನಿಸುವುದು. ಕ್ಷಣದಲ್ಲೇ ಮತ್ತೇ ಮಂಜು ಮುಸುಗಿದಂತೆ,  ಮೋಡ ಕವಿದು ಕತ್ತಲಾದಂತೆ ಭಾಸವಾಗುವುದು.
ಅಲ್ಲಿ ಎಲ್ಲರೂ
ನಯಾಗರ ಜಲಪಾತಕ್ಕೆ  ಸೆನ್ಸ್ ಗಳನ್ನೂ ಎಸೆಯುತ್ತಾರೆ.
ಯಾರ ಸೆನ್ಸ್ ಹೆಚ್ಚಿನ ದೂರಕ್ಕೆ ಹೋಗಿ ಬಿಳುವುದೋ ಅವರು ಅಷ್ಟು ಯಶಸ್ಸು ಸಾಧಿಸುತ್ತಾರೆ. ಎನ್ನುವುದು ಕೆಲವರ ನಂಬಿಕೆ. ಅದೆಷ್ಟು ನಿಜವೋ, ನಾವು ಹಾಗೆ ಎಸೆದು ಸಂತಸಪಟ್ಟೆವು.
ಅಲ್ಲಿನ  ಸುಂದರ ಮನಮೋಹಕ ದೃಶ್ಯವನ್ನು
ಕಣ್ ಮನತುಂಬಿಕೊಂಡು ಸಮಯವಾಗುತ್ತಿದ್ದುದ್ದರಿಂದ ಮನಸಿಲ್ಲದ 
ಮನಸ್ಸಿನಿಂದಲೇ  
ದಡದಿಂದ ಮೆಟ್ಟಿಲೇರಿ  ಮೇಲೆ
ಬರುವಾಗ ಅಲ್ಲೇ ಜನಗಳ ಗುಂಪೊಂದರ ನಡುವೆ  ಸುಂದರ  ಎತ್ತರದ ನವಯುವತಿ ಯೊಬ್ಬಳು ತೆಳು
ಮಾಸಲು ಕಂದು ಗುಲಾಬಿ ಬಣ್ಣದ ಮ್ಯಾಕ್ಸಿ ಧರಿಸಿ ನಿಂತಿದ್ದಳು.
ಜೊತೆಯಲ್ಲಿ ಎದುರಿಗೆ ಒಬ್ಬ ತುಸು ಕುಳ್ಳೆನಿಸುವ ಗುಲಾಬಿ ಬಣ್ಣದ ನವಯುವಕ ಕಪ್ಪು 
ಸೂಟುಧರಿಸಿ ನಿಂತಿದ್ದನು. ನಡುವೆ ಒಬ್ಬರು ಸ್ವಲ್ಪ ಹಿರಿಯರಂತಿದ್ದ 
ಕಪ್ಪು ಕೋಟುಧಾರಿ ಒಂದುಪುಸ್ತಕ ಕೈಲಿ ಹಿಡಿದು 
ಏನನ್ನೋ ಹೇಳುತ್ತಿದ್ದರು. ಸುತ್ತಲು ಹತ್ತು 
ಹನ್ನೆರಡು ಮಂದಿ ಯುವಕರು ಯುವತಿಯರು
ಕುತೂಹಲದಿಂದ ನಡುವೆ ಇದ್ದ ಮೂವರನ್ನು ಸುತ್ತುವರೆದಿದ್ದರು.
ನಡುವೆ  ನಿಂತಿದ್ದ ಹಿರಿಯರು ಏನೋ ಹೇಳಿದರು ಆ ಯುವಕ ಯುವತಿ ಒಬ್ಬರನ್ನು ಒಬ್ಬರು ಅಪ್ಪಿಕೊಂಡರು. ಸುತ್ತಲು ಸುತ್ತು ಗಟ್ಟಿದ್ದವರು ಹೋ ಎಂದೂ ಹರ್ಷೋದ್ಗಾರದಿಂದ ಕೂಗುತ್ತ 
ಅವರಿಗೆ ಕೈಕುಲುಕಿ  
ಶುಭಾಷಯ ಹೇಳುತ್ತಿದ್ದರು. ನಂತರ 
ನಮಗೆ ತಿಳಿಯಿತು 
ಇಲ್ಲಿ ನಡೆಯುತ್ತಿರುವುದು ವಿವಾಹವೆಂದು.
೫ ನಿಮಿಷಗಳಲ್ಲಿ ಅಲ್ಲೊಂದು ಸರಳ ವಿವಾಹ ನಡೆದಿತ್ತು. ಅಭ್ಯಾಗತರಾಗಿ  
ನಾವೂ  ಅವರ ಸಂತಸದಲ್ಲಿ ಪಾಲ್ಗೊಂಡೆವು. ವಿವಾಹವನ್ನು ವೀಕ್ಷಿಸಿ ಸಂತಸವಾಯಿತು.
ಮೇಲೇರಿ ಬರುತ್ತಿದ್ದಂತೆ  ವಿಶಾಲವಾದ  ಹಸಿರ ಹಾಸಿನಲ್ಲಿ ಸ್ವಚ್ಚಂದವಾಗಿ ಯಾರ ಅಡ್ಡಿ ಆತಂಕವು ಇಲ್ಲದೆ  ವಿಹರಿಸುತ್ತಿದ್ದ ಸುಂದರ ಬೆಳ್ಳಕ್ಕಿಗಳು. ದೊಡ್ಡ ದೊಡ್ಡ ಮರದ ನೆರಳು. ನಾವು ಕ್ಯಾಮೆರಾದಲ್ಲಿ ಸೆರೆ ಹಿಡಿಯಲು 
ಹೋದರು ಹಾರಿ ಹೋಗದೆ ತಮ್ಮಷ್ಟಕ್ಕೆ ತಾವು ನಿರ್ಭಯವಾಗಿ ವಿಹರಿಸುತ್ತಿದ್ದದ್ದನ್ನು ಕಂಡು ಅಚ್ಚರಿಯೂ ಆನಂದವು ಆಯಿತು. ಅವುಗಳ ವಿಹಾರ  ಪ್ರಕೃತಿ ಸೌಂದರ್ಯದ 
ಸೊಬಗನ್ನು ನೂರ್ಮಡಿಗೊಳಿಸಿತ್ತು. ಸ್ವಚ್ಛತೆ ಹಾಗೂ ಸೌಂದರ್ಯ 
ಹೆಚ್ಚಿಸಲು
ವಹಿಸಿರುವ ಶ್ರದ್ದೆ  ಮತ್ತು ಅಲ್ಲಿನ ಪರಿಸರ ಎಂಥಹಾ ಅರಸಿಕರನ್ನು  ಮಂತ್ರಮುಗ್ಧರನ್ನಾಗಿಸುವುದು. ಅಲ್ಲಿ ಸೆರೆಹಿಡಿದಿರುವ ಕೆಲವು ಛಾಯಾಚಿತ್ರಗಳು  
ಇಲ್ಲಿವೆ. ಆ ಸೌಂದರ್ಯವನ್ನು ಕವನಿಸಲು ನನಗೆ ತಿಳಿದಂತೆ ನಿರೂಪಿಸಲು ಪ್ರಯತ್ನಿಸಿದ್ದೇನೆ. ನಿಮ್ಮ ಸಲಹೆ 
ಸೂಚನೆಗಳೆನಾದರು  ಇದ್ದಲ್ಲಿ ಸದಾ ಸ್ವಾಗತ ಸ್ನೇಹಿತರೆ.                   
   


ನಯನಮನೋಹರೆ   ನಯಾಗರೇ
*************************************** 


ನಯನ ಮನೋಹರೆ ನಲಿಯುತ ಸಾಗಿರೆ     
ನಾರುಮಡಿಯ ಜಲಧಾರೆ
ಸಾವಿರ ನಿರಿಗೆಯ ಚಿಮ್ಮುತ ಕುಲುಕುತ
ನವಪಲ್ಲವಿಸಿಹಳು ನಯಾಗರೇ


ಶಾಂತ ಸಂಭ್ರಮೆ  ಭೋರ್ಗರೆಯುತ
ಧುಮ್ಮಿಕ್ಕುವ ರಭಸಕೆ ಹೊಮ್ಮುತ ಚಿಮ್ಮುವ
ಪನ್ನೀರು,ಮಂತ್ರಾಕ್ಷತೆ ತಣ್ಣನೆ ತುಂತುರು.
ನಡುಗಿಸುತಲೇ ಭರಸೆಳೆಯುವಳು


ಮೋಡ ಕವಿದಂತೆ,ಮಂಜು ಸುರಿದಂತೆ
ಕ್ಷಣದಲೇ ಇರುಳು ಸರಿದಂತೆ
ಅರುಣೋದಯ ತಾ ಹೊಳೆದಂತೆ


ಮುಸ್ಸಂಜೆಯಲಿ, ಮುಂಜಾನೆಯ                     
ಮೈಬೆಚ್ಚನೆಯ  ಹೊಂಗಿರಣದ  
ಹೊಂಬಿಸಿಲ ಹೊದಿಕೆಯ  ಪುಳಕ   


ನಡುವೆ ನಭದಿ ಬಾಗಿ  ನಗುವ  
ಮೋಹಕ  ಕಾಮನ ಬಿಲ್ಲಿನ ಮೋಡಿ 
ಹಚ್ಚನೆ ಹಸುರಲಿ ಬೆಳ್ಳಕ್ಕಿಯ ಆಟ
ರಮ್ಯಮನೋಹರ ಸುಂದರ ನೋಟ  

ವರುಣ ಇಳಿದಂತೆ,ಅರುಣ ಹೊಳೆದಂತೆ
ನೊರೆಹಾಲ ಜಲರಾಶಿಗೆ ವನರಾಶಿಯ ನಮನ
ಕಣ್ಮನ ತಣಿಸುವ ನಭೋವನ
ಕಡಲಾಚೆಯೇ ಕೈ ಬೀಸುವ ಕೆನಡ


ತನ್ಮಯಗೊಳಿಸುವ ನಿರ್ಮಲ ತಾಣ
ವಿಸ್ಮಯ ವೀಕ್ಷಿತ ನಿಸರ್ಗಧಾಮ