Sep 19, 2011

ಬದ್ಧನಾದ

ಹುಟ್ಟು ಸಾವಿನ
ತಿರುಗಣಿಯ
ಮೆಟ್ಟಿನಿಂತು
ಮುವ್ವತ್ತರ ಹರೆಯದಲಿ
ಹನ್ನೆರಡು ವರುಷಗಳ
ತಪದಲಿ  
ಕೇವಲ ಜ್ಞಾನದಿಂ
ವೀತರಾಗನೆನಿಸಿ,

ಭುವಿಗೆ ಬಿಳುತ್ತಿದ್ದಂತೆ
ಪುರಜನ,ಗುರುಜನರ
ಸುಖಶಾಂತಿ ವೃದ್ದಿಸಲು 
ವರ್ಧಮಾನನೆನಿಸಿ,

ಬಾಲ್ಯದಲೇ ಸರ್ಪವನ್ನು
ಮೆಟ್ಟಿ ನಿಲಲು
ಮಹಾವೀರನೆನಿಸಿ,

ಅರಿವಿನ ಅರಿವಿಗೆ
ಗುರುವಾಗಿ  
ಸನ್ಮತಿ ಎನಿಸಿ,

ಅರಿಷಡ್ವರ್ಗಗಳ
ಜೈಸಿ ಜಿನನಾಗಿ, 
ಲೋಕದ
ಸಮನ್ವಯಕೆ
ಬದ್ಧನಾದ  ಬುದ್ಧನಾದೆ.
***********

Sep 5, 2011

    ಆತ್ಮೀಯರಿಗೆಲ್ಲಾ ಡಾ.ರಾಧಕೃಷ್ಣನ್ ರವರ ಜನ್ಮದಿನದ ನೆನಪಿಗಾಗಿ  ಆಚರಿಸುತ್ತಿರುವ  ಶಿಕ್ಷಕರ ದಿನಾಚರಣೆಯ ಶುಭಾಶಯಗಳು. 
           ಕಾಕತಾಳಿಯವೆಂಬಂತೆ ಕಳೆದ ವರ್ಷ ಅಮೇರಿಕಾದಲ್ಲಿದ್ದ ಈ
ಸಂದರ್ಭದಲ್ಲಿ ಈ ದಿನದ ವಿಶೇಷತೆ ನೆನಪಿಗೆ ಬಾರದಿದ್ದರೂ ಆಕಸ್ಮಿಕವಾಗಿ 
ನನ್ನ ಬ್ಲಾಗ್ ಜನನವಾದದ್ದು ಈ ದಿನವೆಂದು ಅರಿವಿಗೆ ಬಂದಾಗ ನನ್ನ ನೆನಪಿಗೆ ಬರದಿದ್ದರು ನನ್ನಚಟುವಟಿಕೆ, ನನ್ನೊಳಗಿನ ಶಿಕ್ಷಕಿಗೆ ಎಚ್ಚರಿಸಿತ್ತು. 
ಬದುಕಿನಲ್ಲಿ ಬಂದು ಹೋಗುವ ಪ್ರತಿಯೊಬ್ಬರಿಂದಲೂ ಒಂದೊಂದು ರೀತಿಯ ಶಿಕ್ಷಣ ನಮಗೆ ಲಭ್ಯವಾಗುತ್ತಿರುತ್ತದೆ.ಹಾಗಾಗಿ ನನ್ನ ಪಯಣದಲ್ಲಿ ಬಂದು
ಹೋಗಿರುವ,ಮುಂದೆ ಬರುವ ಒಬ್ಬೊಬ್ಬರು ಗುರುವೇ ಎಂದು ನನ್ನ ಭಾವನೆ.  


ಭಾವದ ಒಡಲು...ಕಾವ್ಯದ ಕಡಲು
****************


ಕಾವ್ಯವೇ ಅಗಾಧ ನಿನ್ನ ಜ್ಞಾನದ ಕಡಲು
ನಮಗೆ ಸಾಧ್ಯವೇ ಅದರ ಒಡಲನಳೆಯಲು ....!!!!!!
ಒಡಲನಳೆಯಲು.

ಜಲದ ಮೇಲೆ ಬಿದ್ದ ಹನಿಯು
ಪುಷ್ಪವಾಗಿ ಅರಳಿದಂತೆ
ಹೊಳೆಯ ಮೇಲೆ ಬಿದ್ದ ಮಳೆಯ
ಹನಿಗಳರಳಿದಂತೆ

ಎದೆಯ ಒಳಗೆ ಎದ್ದ ಭಾವ
ನೋವ ನಲಿವ ನುಂಡ ಜೀವ
ಭಾವದೊಲವ ಕಾವಿನಲ್ಲಿ ಹಡೆದ ಶಿಶುಗಳು.
ಅನುಭವದ ದರ್ಪಣವೇ ಆಟಿಕೆಗಳು .

ಭಾವ ಹೃದಯ ಸಂವಾದ
ಅನುಭಾವ ಗೀತ ಸ್ಪಂದ
ಅಕ್ಷರಕ್ಷರದಲಿ ಬೆಸೆವ ಭಾಷೆ ಭಾವಕೆ

ಮಣ್ಣ ಸಾಕ್ಷಿ ಹುಲ್ಲು ಗರಿಕೆ
ಬದುಕ ಸಾಕ್ಷಿ ಭಾವ ಸನಿಕೆ
ಭಾವದೊಲುಮೆಯೊಡನೆ
ತುಡಿವ ಮುಗ್ಧ ಮಕ್ಕಳು..ಮುಗ್ಧ ಮಕ್ಕಳು

ಮೊಗ್ಗಿನಲ್ಲಿ ಮುಗ್ಧವಾಗಿ
ಅರೆಬಿರಿಯೇ ಪ್ರೌಢವಾಗಿ
ಅರಳುತಾ ಪ್ರಬುದ್ಧವಾಗಿ
ಮನದ ಬನದಲಿ

ಹೃದಯದಲ್ಲಿ ಬೆಚ್ಚನೆ
ಕುಳಿತ ಸವಿನೆನಪುಗಳು
ಕಾವು ಪಡೆದು ಮೊಟ್ಟೆಯೊಡೆದು
ರೆಕ್ಕೆ ತೆರೆದು ಹಾರುತಿವೆ
ಎದೆಯಿಂದ ಎದೆಗೆ .... ಎದೆಯಿಂದ ಎದೆಗೆ

ವರುಷದಾ ಹರುಷದಲ್ಲಿ
ಹವಳ ಮುತ್ತು ಹೆಕ್ಕಲಿಕ್ಕೆ
ಹರಸಿರೆಂದು ಹಾಡುತಿದೆ ಭಾವ ಜೀವವೂ...
ಭಾವ ಜೀವವೂ........

ಕಾವ್ಯವೇ..ಅಗಾಧ.....ನಿನ್ನ ಜ್ಞಾನದ ಕಡಲು ....

***********************

Aug 30, 2011

ಎಲ್ಲರಿಗೂ ಗೌರಿಹಬ್ಬದ  ಗಣೇಶ ಚತುರ್ಥಿಯ ಹಾರ್ದಿಕ  ಶುಭಾಶಯಗಳು
*****************


ಸಾರ್ಥಕತೆ
***********


ಗಂಧವೀವೆ ಗಾಳಿಗೆ

ಚಂದವೀವೆ ಕಣ್ಣಿಗೆ

ಜೇನಿಗೀವೆ ಮಧುವನು

ಚಿಟ್ಟೆಗೀವೆ ಮತ್ತನು


ತಾವು ಕೊಟ್ಟು ಇಬ್ಬನಿಗೆ

ಗಾಳಿಯೊಡನೆ ಲಾಸ್ಯವಾಡಿ

ಅಂದದಲ್ಲೇ ಆಕರ್ಶಿಸಿ

ರವಿಗೆ ನಗೆಯ ಬಿರುವೆ .


ಕೀಟಗಳ ಹಸಿವು  ನೀಗಿ  

ಕೀಟಲೆಗೂ ಮೈಯ್ಯೊಡ್ಡಿ

ಹೆಣ್ಣ ಮುಡಿಯಲಿ ನಲಿಯುತ 

ದೇವನಡಿಯಲಿ ನಗುತಲೇ..


ಬಳಲಿ ಬಾಡಿ  ತ್ಯಾಗಿಯಾಗಿ

ಬಾಗಿ  ಮುಕ್ತಿ ಹೊಂದುವೆ

ಸಾರ್ಥಕತೆಯ ಪಡೆಯುವೆ

ನಗುತಲೆ ನೀ ಬದುಕುವೆ  

****************  

Aug 12, 2011

                ಶ್ರಾವಣಮಾಸ ಹಿಂದೂಗಳಿಗೆ ಬಹಳ ಪವಿತ್ರವಾದಮಾಸ .ನಾಗರಪಂಚಮಿ ,ವರಮಹಾಲಕ್ಷ್ಮಿ ,ಗೋಕುಲಾಷ್ಟಮಿ,
ಉಪಾಕರ್ಮ. ಹೀಗೆ ಹಬ್ಬಗಳು ಸಾಲುಸಾಲಾಗಿ  ಬರುತ್ತವೆ .
ಹಾಗೆ ಶ್ರಾವಣ ಪೌರ್ಣಮಿಯಂದು ರಕ್ಷಾಬಂಧನವನ್ನುಭಕ್ತಿ, ಶ್ರದ್ಧೆ,
ಸಂಭ್ರಮಗಳಿಂದ ಆಚರಿಸುತ್ತೇವೆ.ಅಮರನಾಥದಲ್ಲಿ ಶಿವಲಿಂಗದರ್ಷನವಾಗುವುದು
ಈ ಸಮಯದಲ್ಲೇ ಎಂದು ಹೇಳಲಾಗುವುದು.ರಕ್ಷಾ ಬಂಧನಕ್ಕೆ ಯಾವುದೇ
ಜಾತಿ -ಧರ್ಮಗಳ ಕಟ್ಟು ಪಾಡುಗಳಿಲ್ಲ.ಮಾನವೀಯ ಸಂಭಂದಗಳ
ಬಾಂಧವ್ಯದಲ್ಲಿ ನಂಬಿಕೆ ಇರುವ ಸಮಾಜದ ಪ್ರತಿಯೊಬ್ಬರೂ ಇದನ್ನು
ಆಚರಿಸುತ್ತೇವೆ.ಹಾಗೆ ಸ್ನೇಹದಲ್ಲಿ ಸೋದರ ಸಂಬಂಧವನ್ನು ಗಟ್ಟಿ ಗೊಳಿಸುವ ಸುಸಂದರ್ಭವು ಇದಾಗಿದೆ.ರಕ್ಷೆ ಮನುಷ್ಯರ ನಡುವಿನ ಪವಿತ್ರ ಬಾಂಧವ್ಯವನ್ನು ಬೆಸೆಯುವುದಾಗಿದೆ .

         ಇದನ್ನು ಉತ್ತರ ಭಾರತ ಹಾಗೂ ಮಧ್ಯಪ್ರದೇಶಗಳಲ್ಲಿ ವ್ಯಾಪಕವಾಗಿ ಆಚರಿಸುತ್ತಾರೆ.ಅಕ್ಕ ತಂಗಿಯರು,ಅಣ್ಣ ತಮ್ಮಂದಿರಿಗೆ ರಕ್ಷೆಯನ್ನುಕಟ್ಟಿ ತಮ್ಮ
ಮಾನ ಪ್ರಾಣ ರಕ್ಷಣೆಯ ಹೊಣೆ ,ಜವಾಬ್ದಾರಿಯ ಹೊಣೆ ,ಅಣ್ಣ ತಮ್ಮಂದಿರದ್ದು,
ಎಂಬಅರಿವು ಮೂಡಿಸುವುದಾಗಿದೆ.ರಕ್ಷೆ ಕಟ್ಟಿದ ಸ್ತ್ರೀಯರನ್ನು ಪವಿತ್ರ ಭಾವನೆ
ಯಿಂದ ನೋಡುತ್ತಾ ಅವರಿಗೆ ಸಕಲ ಶ್ರೇಯಸ್ಸನ್ನುಹಾರೈಸುತ್ತಾ ಸಹೋದರಿ
ಯರಂತೆ ಕಾಣುತ್ತಾರೆ.ಹಾಗೂ ಸ್ತ್ರೀಯರು ಸಹ ರಕ್ಷೆಯನ್ನು ಕಟ್ಟಿಕೊಳ್ಳುವ
ಮೂಲಕ ತಮ್ಮ ನಡುವಿನ ಸಂಬಂಧವನ್ನು ಗಟ್ಟಿಗೊಳಿಸಿ ಕೊಳ್ಳುವುದು .
ಹಾಗೂ ಸಮಾಜಕ್ಕೂ ನಮಗೂ ನಡುವೆ ಇರುವ ನಂಟನ್ನು ಸೂಚಿಸುವುದರ
ಮೂಲಕ ನಮ್ಮ ಕರ್ತವ್ಯದ ಮನವರಿಕೆ ಮಾಡಿಸುತ್ತಾ, ಇಡಿ ಸಮಾಜದ
ಎಲ್ಲರೂ ತಮ್ಮ ಜಾತಿ ಭಾಷೆ ,ಪ್ರಾಂತ್ಯ ,ಪಕ್ಷ ,ಅಂತಸ್ತು ಇವುಗಳೆಲ್ಲವನ್ನು
ಮೀರಿ ನಾವೆಲ್ಲಾ ಒಂದು. ಎಂದು ಸಾರುತ್ತಾ ಐಕ್ಯ ಮತವನ್ನು ಗಟ್ಟಿಗೊಳಿಸು
ತ್ತಾ.. ನಮ್ಮೆಲ್ಲರ ನಡುವಿನ ಬಾಂಧವ್ಯಕ್ಕೆ ಬೆಸುಗೆಯಾಗುತ್ತೇವೆ.
      
"ಏನ ಬದ್ದ್ಹೋ ಬಲಿಹಿ ರಾಜಾ ದಾನವೇನ್ದ್ರೋ ಮಹಾ ಬಲಃ.
        
ತೀನ ತ್ವಾಮಾನು ಬಧ್ನಾಮಿ ರಕ್ಷೆ ಮಾಚಲ ಮಾಚಲ ."

ಈ ಉಕ್ತಿಯ ಅರ್ಥವೂ ಹೀಗಿದೆ.ದಾನವೆನ್ದ್ರನೂ ,ಮಹಾಬಲನೂ ,
ಆದ ಬಲಿಯ ಕೈ ಯಾವ ರಕ್ಷೆಯಿಂದ ಬಂಧಿತವಾಯಿತೋ, ಆ
ರಕ್ಷೆಯನ್ನು ನಿನ್ನ ಕೈಗೆ ಕಟ್ಟಿದ್ದೇನೆ.ಹೇ ರಕ್ಷೆಯೇ ಕಳಚಿ ಬಿಳದಿರು ..,
ಕಳಚಿ ಬಿಳದಿರು.ಎಂಬುದಾಗಿದೆ.ಈ ಉಕ್ತಿಯು ರಕ್ಷೆಯ ಇತಿಹಾಸವನ್ನು
ಸಾರುತ್ತದೆ.


        ದೇವೇಂದ್ರನಿಗೆ ಶಚಿದೇವಿ ಕಟ್ಟಿದ ರಕ್ಷೆಯಿಂದಾಗಿ ಅಸುರರ ವಿರುದ್ಧ
ಜಯ ಸಾಧಿಸಲು ಸಾಧ್ಯವಾಯಿತು ಎಂಬ ಉಲ್ಲೇಖವೂ ಇದೆ.ಯುದ್ಧ ಸನ್ನದ್ಧರಾದ ಯೋಧರನ್ನು ,ಕಾರ್ಯೋನ್ಮುಖರಾದ ಪುರುಷರನ್ನೂ "ವಿಜಯಿಯಾಗಿ ಬಾ "ಎಂಬ
ಆಶಯದೊಂದಿಗೆ ರಕ್ಷೆ ಕಟ್ಟುವ ಪದ್ಧತಿ ರೂಢಿಯಲ್ಲಿತ್ತು.ಎಂಬುದನ್ನು ದ್ರೌಪದಿ ಶ್ರೀ ಕೃಷ್ಣನಿಗೆ ರಕ್ಷೆಯನ್ನು ಕಟ್ಟಿ, ತನ್ನ ರಕ್ಷಣೆಯ ಜವಾಬ್ದಾರಿಯನ್ನು ವಹಿಸಿದ ಸಂಗತಿಯನ್ನು ಮಹಾಭಾರತದಲ್ಲಿ ಕಾಣುತ್ತೇವೆ.ಹೀಗೆ ರಕ್ಷೆ,ರಕ್ಷಣೆಯ ,ಮೈತ್ರಿಯ,ಸೋದರತ್ವದ ದ್ಯೋತಕವಾಗಿದೆ.
         
        ಒಂದಿಷ್ಟು ನೂಲುಗಳನ್ನು ದಾರ ಒಂದರಿಂದ ಬಂಧಿಸಿ ಬಂಧಿಸಿ,ಕುಚ್ಚು ಮಾಡಿದಾಗ ಸಿದ್ಧವಾಗುವ ರಕ್ಷೆಯ ಮಹತ್ವ ಸಾಮಾನ್ಯವಾದುದಲ್ಲ ..!!!!
ಅದು ಒಗ್ಗಟ್ಟಿನ ಬಲ ಹಾಗೂ ಸೌಹಾರ್ಧದ ಸೌಂದರ್ಯವನ್ನು
ಸಾರುವುದರ ಸಂಕೇತವಾಗಿದೆ.
                
        ರಾಜಾಸ್ಥಾನದ ಚಿತ್ತೋಡಿನಲ್ಲಿ "ಜ್ವಾಲ" ಎಂಬ ಪುಟ್ಟ ಹುಡುಗಿಯ
ಮನೆಯಲ್ಲಿ ಅಂದು ರಕ್ಷಾ ಬಂಧನದ ವೈಭವ .ಅ ಮಾರ್ಗವಾಗಿ ಬರುವ ಯಾರಾದರೊಬ್ಬರನ್ನು ಮನೆಯೊಳಗೇ ಕರೆದು ಅತಿಥಿ ಸತ್ಕಾರ ಮಾಡಿ ,
ಸಿಹಿ ಕೊಟ್ಟು ರಕ್ಷೆ ಕಟ್ಟಿದ ನಂತರವೇ ಮನೆಯವರು ಆಹಾರ ಸ್ವೀಕರಿಸಬೇಕೆಂಬ
ನಿಯಮ. ಸರ್ವಾಲಂಕಾರ ಭೂಶಿತಳಾದ ಚೆಂದದ ಹುಡುಗಿಯ ಕಣ್ಣಿಗೆಅಂದು ಕಂಡಿದ್ದು ಕುಖ್ಯಾತ ಡಕಾಯಿತ "ಲಖನ್ ಸಿಂಹ ".ಆದರೆ ಆ ಬಾಲಕಿ ಹೆದರದೆ ಆತನನ್ನುಪ್ರೀತಿಯಿಂದ"ಅಣ್ಣಾ"ಎಂದುಒಳಕ್ಕೆ  ಕರೆದು,ರಕ್ಷೆಕಟ್ಟಿಸಿಹಿತಿನ್ನಿಸಿ ,
ಪಾದಗಳಿಗೆ ನಮಸ್ಕರಿಸಿ ಆಶೀರ್ವಾದವನ್ನು ಬೇಡುತ್ತಾಳೆ .ಜೀವನದಲ್ಲಿ
ಮೊಟ್ಟ ಮೊದಲ ಬಾರಿಗೆ ಅನುಭವಿಸಿದ ಇಂತಹ ಅನೂಹ್ಯ ಪ್ರೀತಿ,
ವಿಶ್ವಾಸಗಳಿಗೆ ಆಡಕಾಯಿತನ ಹೃದಯ ತುಂಬಿ ,ಕಣ್ ತುಂಬಿ ಬಂದು,
ಆಕೆಯ ವಿಶ್ವಾಸಕ್ಕೆ ಪ್ರತಿಯಾಗಿ "ನಿನಗೇನೂ ಉಡುಗೊರೆ ಬೇಕು "
ಎಂದು ಕೇಳಿದಾಗ ಆ ಪುಟ್ಟ ಬಾಲಕಿ "ನೀನು ದರೋಡೆ ವೃತ್ತಿಯನ್ನು
ಬಿಡಬೇಕು "ಎಂದು ಕೇಳಿಕೊಳ್ಳುತ್ತಾಳೆ..ಕೊಟ್ಟ ಮಾತಿನಂತೆಯೇ ಆತ
ಒಪ್ಪಿ, ದರೋಡೆ ವೃತ್ತಿಯನ್ನು ಬಿಡುವುದಲ್ಲದೆ ತನ್ನ ತಪ್ಪೊಪ್ಪಿಕೊಂಡು,
ಹಿಂದೆ ತಾನು ಮಾಡಿದ ಅಪರಾಧಗಳಿಗೆ ಶಿಕ್ಷೆಯನ್ನು ಅನುಭವಿಸುತ್ತಾನೆ.
ಹೀಗೆ ದುಷ್ಟರನ್ನೂ ,ದರೋಡೆಕೋರರನ್ನೂ,ಕೆಟ್ಟ ಭಾವನೆಯವರನ್ನು
ಪರಿವರ್ತಿಸಬಲ್ಲದು ಈ ರಕ್ಷೆ .ಇಂತಹಾ ಪ್ರೀತಿ ಸ್ನೇಹ ಸೌಹಾರ್ಧ
ಐಕ್ಯತೆಯನ್ನು ಗಟ್ಟಿಗೊಳಿಸುವ
ರಕ್ಷಾಬಂಧನದ ಹಾಗೂ ವರಮಹಾ ಲಕ್ಷ್ಮಿ ಹಬ್ಬದ ಹಾರ್ಧಿಕ
ಶುಭಾಶಯಗಳು ನಮ್ಮೆಲ್ಲಾ ಸ್ನೇಹಬಳಗಕ್ಕೂ ....... --

Jul 30, 2011



ಮ-ಮನಸಿನ,
ನೆ-ನೆಮ್ಮದಿ
******* 


ಭಾವವೆಂಬ  ಗೋಡೆಗಳಿಗೆ

ಜ್ಞಾನವೆಂಬ ಕಿಟಕಿಯಿಂದ

ಸ್ವಚ್ಛಗಾಳಿ,  ಶುದ್ಧಕಿರಣ    

ಒಳಗೆ ಸುಳಿಯೇ,

 ದೇಹವೆಂಬ  'ಮನೆಗೆ' 

ಸ್ವಾನಂದಾನುಭವವು  



ಕರ್ತವ್ಯ
*****

ಬಂದದ್ದನ್ನು ಸ್ವೀಕರಿಸುವುದು

ಕರ್ತವ್ಯ

ಅದಕೆ ಆಶಿರ್ವಾದಿಸುವುದು

ಆದ್ಯ ಕರ್ತವ್ಯ 


ವ್ಯಕ್ತಿತ್ವ-ಭಾವ
*********

ವ್ಯಕ್ತಿಯ ಹುಟ್ಟು

ಕಾಮದಿಂದಲಾದರು ,

ವ್ಯಕ್ತಿತ್ವದ ಹುಟ್ಟು

ಪ್ರೇಮದಿಂದಲೇ,  


ಸಂಗೀತದ ಹುಟ್ಟು

ಭಾವದಿಂದಲಾದರು

ಭಾವದ ಹುಟ್ಟು

ಸಂಸ್ಕಾರದಿಂದಲೇ
************   

Jul 25, 2011


*ವೀರಯೋಧನಾಗು*ವಿಶ್ವಮಾನವನಾಗು*

*ಪುಟ್ಟ ಪೂರ್ವಿತ್ *ಗೆ , ಹುಟ್ಟು ಹಬ್ಬದ ಶುಭಾಶಯಗಳು *
*ಬಾಲರವಿಯಾಗು *

ಎನ್ನ ಮನದಂಗಳದ ನಗುವ ಹೂವೆನಿನ್ನ   

ಮುಗ್ಧ ನಗೆ ಕಂಗಳಲಿ 

ಮಿಂಚೊಂದು


ಹೊಮ್ಮುತಿದೆ

ನಿನ್ನೆಳೆಯ ಅದರದಲಿ

ಮಂದಹಾಸವೇ ಅರಳಿ,

ನಿಷ್ಕಲ್ಮಶ ತಣ್ಣನೆಯ ನಗುವಿಗೆ

ಅರಸಿಕರೆದೆಯನು                                                

ಮೀಟಿ ತನ್ನೆಡೆ ಸೆಳೆವ ಮೋಹಕ ನೋಟದಲಿ  

ತಾರೆಗಳು ಮಿನುಗುತಿವೆ   
 


ದುಗುಡದುಮ್ಮಾನಗಳಮರೆಸಿ             
ಮುದುಡಿದ ತಾವರೆ ಅರಳಿಸುವ                
ಸೊಬಗಿನ ಪೌರ್ಣಮಿ ಶಶಿಯಾಗಿ  

ಹಾಲ್ಬೆಳುದಿಂಗಳ  ಹೂ ಮೊಗದ
ವಾತ್ಸಲ್ಯದ ವಾಂಛೆಗೆ  
ಮೂಕನು ವಾಗ್ಮಿಯಾಗುವನು .

ನಗುವಿನ ಹೊನಲು ಮನೆಯಾವರಿಸಿ  
ಮನಗಳ ಮುದಕೆ ಮೂಲವಾಗಿ,   
ಬಂಧವ  ಬೆಸೆವ ಸೇತುವಾಗಿ   ,
ಮುದ್ದು ತೊದಲಿಗೆ ಮುದ್ದಿಸಿ ನಲಿಯಲು  ಸದಾನಂದ ನೀನಾಗಿ  
"ತಿನ್ನಲಾರದ ಹಣ್ಣು ಬಲುರುಚಿ"!!!!!!!!


*ಪೂರ್ವಿತ್ * ಬೆಳಗುತಿರು ಬದುಕಲಿ  ಬಾಲರವಿಯಾಗಿ *

************************








































































Jul 12, 2011

 ದೊಂಬರಾಟ

ದುಬಾರಿ ದುನಿಯಾದೊಳಗೆ

ದೂರ್ವಾಸರ ದೊಂಬರಾಟ

ಧರಣಿಗೆ ಒಡೆಯರೇ

ಶರಣರು,ಸಂತರೆಂಬ

ಹಂತಕರ ಜೋಳಿಗೆ

ಉದ್ಧಾರಕ್ಕೆ,

ಧರ್ಮಾತ್ಮರ ಸೋಗು.

ಕುರ್ಚಿಗಾಗೆ ಕ್ರಾಂತಿ

ಎಬ್ಬಿಸುವ ಕುತಂತ್ರಿಗಳಿಗೆ

ಗಂಟು, ಸೀಟು ಮೀಸಲು.

ತಳ ಗಟ್ಟಿಯಾದಂತೆ

ಸಮಾಜ ಸೇವೆಗೆಲ್ಲಾ 

ವಿಶ್ರಾಂತಿ...!!!

ಅನುಕಂಪಕ್ಕೆ ಕಣೀರು ! !

ಮಹಾತ್ಮರ ಮುಷ್ಕರಕ್ಕೆ

ಮೂರ್ಖರ ಕೆನೆತ.

ದೊಂಬರ ಹೊಟ್ಟೆಗೆ

ತಣ್ಣೀರು ಬಟ್ಟೆ ಶಾಶ್ವತ
****************