Nov 13, 2010





ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು
            ********************


*ಹೂಬತ್ತಿ*

ಬೆಂಕಿಯ  ಕಿಡಿಗಳಾಗಿ  
     ಹೊಮ್ಮದೇ
ಬೆಳಕಿನ ಕಿರಣಗಳಾಗಿ 
 ಹೊಮ್ಮಲಿ ಹೂ ಬತ್ತಿ

ಅವರಿಲ್ಲದೂಟ

      ಬಂದು ಹೋಗುವ  
               ನಡುವೆ           
      ನಗೆ ಧಗೆಗಳಲೆಗಳು
          ದೊಡ್ದಲೆಗೆ ಬಿದ್ದು
         ಹೋದವರ ನೆನಪು
        ಮತ್ತೆ ಮಹಾಲಯದಿ

              ಅವರಿಲ್ಲದೂಟ
          ಕೂಟ ಸೇರಲೇ ಕಾಟ
             ಸೇರಿದರು ಆಟ

           ದೀವಳಿಗೆ ಜಗಮಗಿಸಿ
             ದಿವಾಳಿಯಾದಾಗ
              ನೆನಪೊಂದು ನಗೆ
*********************** 
ಕ್ಷಮಿಸಿ ಸ್ನೇಹಿತರೆ,ಹಬ್ಬದ ದಿನಗಳಲ್ಲಿ ವಿದೇಶದಿಂದ ಸ್ವದೇಶಕ್ಕೆ
ಪಯಣಿಸುತ್ತಿದ್ದ ಕಾರಣ,ತಡವಾಗಿ ಶುಭಾಷಯ ಕೋರುತ್ತಿದ್ದೇನೆ   

Oct 28, 2010



ಎಲ್ಲ ಬಂಧಕು ಮಿಗಿಲು ಪ್ರಕೃತಿಯ ಒಡಲು

ಗಿರಿಕಾನನಗಳ ನಡುವೆಯೇ ಸಾಗಿಹ
ಸುಂದರ ವೇಣಿಯ ಹೆದ್ದಾರಿ 
ವನರಾಶಿಯ ಸೊಬಗಿಗೆ ರಹದಾರಿ

ನಯನ ಹರಿದರತ್ತತ್ತ ಒತ್ತೊತ್ತ ಹಸಿರಸಿರಿ
ವಾತ್ಸಲ್ಯದಿ ಒಂದಕೊಂದು ಬೆಸೆದ ಬೆಟ್ಟಹಾರ  
ನಟ್ಟನಡುವೆ ಪುಟ್ಟ ಮುದ್ದುಮನೆ

ಅಂಕು ಡೊಂಕು ಹಾದಿಗೇ ಎದುರೆ ಚಾಚಿದಂತೆ ಬೆಟ್ಟ
                                          ರವಿಕಿರಣದ ನರ್ತನದಿ                                            
ಪಂಚರಂಗಿ ಪರ್ಣಶಾಲೆ ಹಡೆದ ಹೊನ್ನದರ್ಶನ 
ಶೋಭಿತೆಯರ ಸಭಾಂಗಣ  
                                                                                              
ಸುಮನೋಹರ ಸುರಸುಂದರ ಬಿನ್ನಾಣಗಿತ್ತಿಯರು  
ಸುತ್ತಲು  ಜಲರಾಶಿಗೆ ಮುತ್ತಿನಿಂತು  ಗಿರಿವನವನೆ  
ಅಪ್ಪಿಕೊಂಡ ಆಗಸಕೆ ಸುವರ್ಣ  ತಳಿರ ತೋರಣ  

ಚುಮುಚುಮು ಚಳಿಯಲಿ ಚೈತ್ರನ ಬರವಿಗೆ
ತನ್ನೆಲೆಗಳನೆ  ಸುವರ್ಣಗೊಳಿಸಿ ಕಾದಿಹ 
ಸುಮನಸೆ ಹಸಿರಲೇ ಹಾಯ್ದ ಹೂವಿನ ಭೂಸಿರಿ

ತರಳೆಯರಿಲ್ಲದ ಊರಲಿ ಮಾಗಿದ ತಳಿರೆ ತಳೆದಿಹ  
ವರ್ಣರಂಜಿತ ಮೈಸೊಬಗು,ಆಹ್ವಾನಕಲಂಕೃತ 
ಹೂಧಾನಿ, ಮಂದಹಾಸದ ಮಿನುಗು  ಸ್ವಾಗತಕೆ  

ಸಸ್ಯ ಶ್ಯಾ - ಮಲೆಯರ ನಡುವೆ
ನಿತ್ಯ ಕೋಮಲೆಯರ ಮಾಯಮಾಲುಗಳು
ಎಲ್ಲ ಬಂಧಕು ಮಿಗಿಲು ಪ್ರಕೃತಿಯ ಒಡಲು
ಒಡಲೊಳಗೆ, ಭೇದವಿಲ್ಲದೆ  ಬೆರೆತು ಮರೆಯೋಣ
ಅರೆಘಳಿಗೆ  ಕಲ್ಲು ಮುಳ್ಳುಗಳ ಕಡಲು

 -----------------------------------

ಮೂರು ಮಾಸಗಳ ಮನೋಲ್ಲಾಸಕೆ ಮತ್ತು ಬ್ಲಾಗ್ ಲೋಕವನ್ನು ಪ್ರವೇಶಿಸಲು ಮೂಲ
ಕಾರಣ ಕರ್ತರು,ಪ್ರೇರಕರು, ಕವನಸ್ಪೂರ್ತಿಯಸೆಲೆಗಳೂ ಆದ,

        ನನ್ನ ಪ್ರೀತಿಯ  ಮಾನಸರಘುಪ್ರಸಾದ್ ರವರಿಗೆ  
         ದ್ವಿತೀಯ ವಿವಾಹ ವಾರ್ಷಿಕೋತ್ಸವದ ಹಾರ್ಧಿಕ ಶುಭ ಹಾರೈಕೆಯೊಂದಿಗೆ ಪ್ರೀತಿಯ
  ಉಡುಗೊರೆಯಾಗಿ ಈ  ಕವನಕಾಣಿಕೆ.   

ಪ್ರಕೃತಿಯ ಪೂರಣದಂತೆ ನಿಮ್ಮ ವೈವಾಹಿಕ
ಬದುಕು ಎಂದೆದೂ  ಹಸಿರಾಗಿರಲೆಂದು
ಹಾರೈಸುವ ಅಮ್ಮ ಕಲಾವತಿಮಧುಸೂಧನ್



Oct 18, 2010

ಅಂತರತಮ ನೀ ಗುರೂ.......




ಎಂಥಾ ಮೊಗವಿತ್ತೆ, ಅದಕೇ ಏನು ಗುನುಗಿಟ್ಟೆ ?
ಕಾಣುವ ಕಣ್ಣಿಗೆ ದುಗುಡವ ತುಂಬಿದ ಭಾವಾ ಏಕಿತ್ತೆ ..?ಗುರುವೇ

ನೋಟಕೆ ನಗುವಿನ ಸೋಗನು ಸಾರುವ ನಾಟಕ ಮರೆಸಿಟ್ಟೆ
ಏನೋ ಅಪರಾಧವೆಸಗಿದೆವೆಂದು ಯೋಚಿಸುವಂತಿಟ್ಟೆ
ಭಾವಕೆ ಸ್ಪಷ್ಟನೆ ನೀಡದೆ ಉಳಿದರೆ ಮುನಿಸು ಸರಿಯಷ್ಟೇ..
ಮುನಿಸೂ  ಸರಿಯಷ್ಟೇ...ಗುರುವೇ

ಬಾಹ್ಯಕೆ  ಒಪ್ಪು ಆಂತರ್ಯಕೆ ಮುಪ್ಪು ಏಕೇ ನೀನಿಟ್ಟೆ ?
ಊರು ದಬ್ಬುವ ಕಾಡು ತಬ್ಬುವ ಕಾಲ ಏಕಿತ್ತೆ ?  
ನೋಡಲು ಅಚ್ಚರಿಗೋಳ್ಳುತ ಬಯಸುವ ಬಯಕೆ ಏಕಿಟ್ಟೆ?  
ಬಳ್ಳಿಯ ತಬ್ಬಿದ  ಮರವನೆ  ಉರುಳಿಸಿ  ನೀ ಸಂತಸಪಟ್ಟೇ !
ನೀ ಸಂತಸಪಟ್ಟೆ....ಗುರುವೇ

ಬಾಡಿದ ಬಳ್ಳಿಗೆ ಬಂಧವ ಕಟ್ಟಿ ಕಾಯದ ಚಿಗುರಿಟ್ಟೆ
ಇರುಳಿನ ಕಂಬನಿ ಹಗಲಲಿ ಹೊಳೆವಾ ಇಬ್ಬನಿಯಾಗಿಟ್ಟೆ
ಅಂದದ ಹೂವಿಗೆ ಅಂತರತಮ ವೈರಾಗ್ಯವನೆಕಿಟ್ಟೇ?
ಮನಸು  ಬರಿದೇ ಮಾಡಿ ಬದುಕ ಬಿಂದಿಗೆ ತುಂಬಿಟ್ಟೆ
ಬಿಂದಿಗೆ ತುಂಬಿಟ್ಟೆ..ಗುರುವೇ

ನೇರನುಡಿಗೆ ನಿಷ್ಟೂರದ ಮುನ್ನುಡಿ ಬರೆದಿಟ್ಟೇ !                        
ನೆರವೂ ಬೇಕಾದಾಗ ನೆಂಟರ ನೆನಪೂ ಬಂದಿತ್ತೇ!
ಸಂಬಂಧಗಳಲಿ ಹೊಂದಾಣಿಕೆಯ ಏಕೇ ಹೊರಗಿಟ್ಟೇ?
ಮಾತಲೇ ಮುತ್ತನು ಸುರಿಸಿ ಸೆಳೆಯುವ ಕಲೆಯ ಮರೆಸಿಟ್ಟೇ
ಕಲೆಯಾ  ಮರೆಸಿಟ್ಟೆ ...ಗುರುವೇ
 

Sep 24, 2010

ನಾ ಕಂಡ ಕಾರ್ನಿಂಗ್

 ನಿಶಬ್ಧತೆಯ  ಶಾಂತತೆಯಲಿ,                                
ಸುಯ್ಯೆನುತ ಸೊಂಪಾಗಿ  ಬೀಸುವ ,
ತಂಗಾಳಿಗೆ ಮೈಯ್ಯೊಡ್ಡಿ
 ಕೊಂಬೆ ರೆಂಬೇಗಳಲಿ, ಚಾಮರ ಬೀಸುತ ,
ತಲೆದೂಗುತ ಜೋಗುಳ ಹಾಡುತಿವೆ.
ಎಲೆಗಳು ಸರಸರ ಮಾರ್ಧ್ವನಿಸುತಿದೆ.

ಹಕ್ಕಿಯ ಕಲರವವಿಲ್ಲಿಲ್ಲ ,
ಗಾಳಿಯ ಜೊತೆಯಾಡುವ  ಗಿಡಮರಗಳ  
ಸೋಬಾನೆಯೇ ಪರಿಸರವೆಲ್ಲ.

ವಿಸ್ತಾರ ರಸ್ತೆಯಲಿ  ಮೀರದ ನಿಯಮ,
ಸಶಬ್ಧ ಸುವೇಗದಿ ಸರಿದಾಡುವ
ಕಾರುಗಳದೇ  ಕಾರುಬಾರು.

ಪ್ರತಿ ಮನೆಯಂಗಳ ನಂದನವನವೇ,
ಕಣ್ಮನ ತಣಿಸುವ ಬಗೆಬಗೆ ಹೂಗಳು,
ಪ್ರಕೃತಿಯ ಸೊಬಗನು ನೂರ್ಮಡಿಗೊಳಿಸಿದೆ.

ಪಚ್ಚೆಯ ನಡುವೆ ಹಚ್ಚನೆ ಮನೆಗಳು,
ಕಾರ್ನಿಂಗ್ ಮನಗಳ ಕೈಚಳಕ
ಸ್ವಚ್ಛತೆಯೇ  ಪ್ರಾಮುಖ್ಯತೆ ಇಲ್ಲಿ ,
ನಿಯಮವ ಮೀರದ ಪರಿಸರಪ್ರೀತಿಯ,
ನಿಷ್ಕಲ್ಮಶನಗು ಪಸರಿಸಿದೆ.

ಶಾಂತತೆಯನು ಪ್ರತಿಬಿಂಬಿಸಿದೆ.
ಯಾರ ಗೊಡವೆ ಯಾರಿಗಿಲ್ಲ,
ಅವರ ಶ್ರದ್ಧೆ ಅವರದೇ,
ಕಂಡ ರಕ್ಕರದಿ ನಗುತ,
ಮುಂದೆ ಅವರು ಅವರೇ.

ಕಾರ್ನಿಂಗ್ ಕಾಂತ ಕಾಂತೆಯರು. 
ನಡುವೆ ಜೋಡಿ ಮುದ್ದುಗಿಳಿಗಳಾಟ ಚಿಲಿಪಿಲಿಸಿದೆ. 

Sep 13, 2010

ಜನತಾ ಮಾಧ್ಯಮ ಪತ್ರಿಕೆಯಲ್ಲಿ ೨೦ ಜೂನ್ ೨೦೧೦ ರಲ್ಲಿ ಪ್ರಕಟಗೊಂಡ "ಲಹರಿ"  

ಕವನ "ಆ ಕಾಣದವ"



 

Sep 11, 2010

ಓಂ ಗಂ ಗಣಪತಿಯೇ ನಮಃ  ಕವಿಗಾಯಕ ಗಣನಾಯಕ ಜನಪ್ರಾಣಕ ಸಿರಿಯೇ....     
Add caption