Dec 23, 2010

"ಅಹಂ ಎಂಬ ಮಾಯೆ"                                                  
   ಬದುಕು ಮಾಯೆಯ ಮಾಟ,
       ಮಾತು ನೊರೆ ತೆರೆಯಾಟ,
       ಅಹಂ ಎಂಬ ಮಾಯೆ ಮರೆಸುವುದು,
       ಮಾನವತೆಯ ಪಾಠ.  
            ಪ್ರತಿದಿನವೂ, ಪ್ರತಿಕ್ಷಣವು, ಪ್ರತಿಯೊಬ್ಬರಿಂದಲೂ, ಪ್ರತಿ ಹಂತಗಳಲ್ಲು ಒಂದಿಲ್ಲೊಂದು
ರೀತಿಯಲ್ಲಿ ಯಾವುದಾದರು ಒಂದು ಪಾಠವನ್ನು ಕಲಿಯುತ್ತಲೇ ಇರುತ್ತೇವೆ.ನಾವು ಎಷ್ಟೇ ಎಚ್ಚರಿಕೆ ವಹಿಸಿದರು
ನಮಗೆ ಅರಿವಿಲ್ಲದೆ ನಮ್ಮಲ್ಲೊಮ್ಮೆ ನುಸುಳಲು ಪ್ರಯತ್ನಿಸುವುದು ಅಹಂ ಎಂಬ ಮಾಯೆ. ಸ್ವಲ್ಪ ಅಲಕ್ಷ  ಮಾಡಿದರು ಅದು ನಮ್ಮ ವ್ಯಕ್ತಿತ್ವವನ್ನೇ  ನಾಶ ಪಡಿಸುವುದು.ಹಾಗಾಗಿ ನಮ್ಮವಿವೇಕವನ್ನು ಸದಾ ಎಚ್ಚರವಾಗಿರಿಸಿಕೊಳ್ಳಲು  
ಮಹಾನ್  ಸಾಧಕರ ಮಾರ್ಗದರ್ಶನ ನಮ್ಮ ಮನಃ ಪಟಲದಲ್ಲಿ ಸುಳಿಡಾದುತ್ತಿದ್ದರೆ ಅಹಂ ಎಂಬ ಮಾಯೆ ಯಿಂದ ದೂರ ವಿರಲು ಸಾಧ್ಯವಾಗುವುದು.ಅಹಂ ಎಂಬುದು ಪ್ರಾಕೃತಿಕವಾಗಿಯೂ ಹೇಗೆ ಬಿಂಬಿಸುವುದು ಎಂಬುದನ್ನು ಕೆಲವು ಉದಾಹರಣೆಗಳಿಂದ ವಿವರಿಸಿದ್ದಾರೆ.  

 ಸಂಜೆಯಾಗುತ್ತಿದ್ದಂತೆ ಮಿಂಚುಹುಳುಗಳು ಬಂದಾಗ ನಾವು ಜಗತ್ತಿಗೆ ಬೆಳಕನ್ನು ಕೊಡುತ್ತಿರುವೆವು ಎಂದು
ಜಂಭ ಕೊಚ್ಚಿಕೊಳ್ಳುವವು.ನಂತರ ನಕ್ಷತ್ರಗಳು ಮಿನುಗಲು ಪ್ರಾರಂಭಿಸಿದ ಮೇಲೆ ಅವುಗಳ ಅಹಂಕಾರ ಅಡಗಿ
ಮಂಕಾಗುವವು. ಈ ನಕ್ಷತ್ರಗಳು "ನಾವೇ ಜಗತ್ತನ್ನು ಬೆಳಗುತ್ತಿರುವೆವು," ಎಂದು ಬೀಗುವವು.ಸ್ವಲ್ಪಹೊತ್ತಿಗೆಲ್ಲಾ  
ಚಂದ್ರೋದಯದ ಕಾಂತಿಯು ನಕ್ಷತ್ರಕ್ಕೆ ನಾಚಿಕೆ ತರುತ್ತದೆ. ನಕ್ಷತ್ರಗಳು ವ್ಯಸನದಿಂದ ಮಂಕಾಗುತ್ತವೆ. ಪುನಹ  ಚಂದ್ರನು ಬೀಗುತ್ತಾ ಅಹಂನಿಂದ" ತನ್ನ  ಬೆಳದಿಂಗಲಿನಿಂದಲೇ ಜಗತ್ತು ಪ್ರಕಾಶಮಾನವಾಗಿದೆ.ಸೌಂದರ್ಯದಲ್ಲಿ ಮುಳುಗಿದೆ ."ಎಂದು  ತಿಳಿಯುವನು.ಆದರೆ ಕ್ರಮೇಣ ಅರುಣೆಪೂರ್ವ ದಿಗಂತದಲ್ಲಿ ಸೂರ್ಯೋದಯವನ್ನುಸಾರು 
ವಳು. ಈಗ ಚಂದ್ರನೂ ಮಂಕಾಗುವನು.ಸೂರ್ಯನ ಪ್ರಖರತೆಗೆ ಚಂದ್ರನುಸಂಪೂರ್ಣಮರೆಯಾಗುವನು.ಇನ್ನು 
ಮೋಡ ಮುಸುಗಿ ಸೂರ್ಯನ ಕಿರಣಗಳನ್ನೂ ಮುಚ್ಚಿದರೆ ಸೂರ್ಯನೂ ಅಸಹಾಯಕನಾಗುವನು.ಅಂತೆಯೇ ಅಹಂ
ಇರುವವರೆಗೂ.  
          ಹಾಗೆಯೇ ಪ್ರಾಕೃತಿಕವಾಗಿ ದೈವದತ್ತವಾದ ಶಕ್ತಿ ,ಸೂರ್ಯನನ್ನೇ ಕಾಣದಂತೆ ಮಾಡುವ ಮೋಡವೇ 
ಅಹಂಕಾರ.ಮೋಡವೂ ಕರಗಿ ನೀರಾದರೆ ನೈಜತೆಯನ್ನು ಕಾಣಬಹುದು.
          ಉದಾಹರಣೆಗೆ :
"ರಾಮಕೃಷ್ಣರ ಉಪದೇಶಾಮೃತ ಸಾರದಲ್ಲಿ"  ಸಾಕ್ಷಾತ್ ಭಗವಂತನೆಂದು ಪೂಜಿಸಲ್ಪಡುವ
ರಾಮಚಂದ್ರನು ಲಕ್ಷ್ಮಣನೆಂಬ  ಜೀವನಿಗಿಂತ ಒಂದೆರಡು ಹೆಜ್ಜೆ ಮುಂದೆ  ಇರುವನು.ನಡುವೆ ಸೀತೆ ಎಂಬ
ಮಾಯೆ  ನಡುವೆ ಇರುವುದರಿಂದ ಲಕ್ಷ್ಮಣನಿಗೆ ರಾಮನ ದರ್ಶನ ಸಾಧ್ಯವಾಗುವುದಿಲ್ಲ.ಆಗ ಸೀತೆಯನ್ನು ಪಕ್ಕಕ್ಕೆ 
ಸರಿಯುವಂತೆ ಕೇಳಿಕೊಂಡನು.ಸೀತೆ ಪಕ್ಕ ಸರಿದ ತಕ್ಷಣವೇ ಭಗವಂತನ ದರ್ಶನ ವಾಯಿತು.ಎಲ್ಲಿಯವರೆಗೆ ಅಹಂ ಎಂಬ   
ಮಾಯೆ ಸರಿಯುವುದಿಲ್ಲವೋ, ಅಲ್ಲಿಯವರೆಗೆ ಆತ್ಮ ಜ್ಞಾನವನ್ನು ಹೊಂದಲಾರ.ಮನುಷ್ಯನ ಅಹಂಕಾರವೇ ಮಾಯೆ.
ಎಲ್ಲವೂ ಅವನಿಂದಲೇ ,ನಾನು ಎಂಬುದು ನಿಮಿತ್ತ ಮಾತ್ರ,ಎಂಬುದನ್ನರಿತು."ನಾನು , ನಾನಿಂದಲೇ,ನಾನೇ",
ಎಂಬುದು ನಾಶವಾದಾಗ ಮಾತ್ರ,  ಲೋಕಹಿತನಾಗುವನು.
         "ರಾಮಕೃಷ್ಣರಉಪದೇಶಾಮೃತದಲ್ಲಿಯೇ" ಮತ್ತೊಂದು ಕಡೆ  ಹೇಳಿರುವಂತೆ, ಕರು ಹುಟ್ಟುತ್ತಲೇ"ಹಂ ಹೈ"ಹಂಹೈ"
(ನಾನಿರುವೆ ,ನಾನಿರುವೆ,)"ಎಂದು ಅಹಂ ನಿಂದ ಕೂಗುವುದು. ಅದು  ದೊಡ್ಡದಾದ ಮೇಲೆ
 ಎತ್ತಾದರೆ ನೇಗಿಲಿಗೆ ಕಟ್ಟುತ್ತಾರೆ ,ದವಸ ಧಾನ್ಯದ ತುಂಬಿದ ಗಾಡಿಯನ್ನೆಳೆಸುತ್ತಾರೆ .ದುಡಿಸಿಕೊಳ್ಳುತ್ತಾರೆ.
ಸೋತರೆ ಕೊಂದುತಿನ್ನುತ್ತಾರೆ. ಇಷ್ಟೊಂದು ಶಿಕ್ಷೆ ಅನುಭವಿಸಿದರೂ  ಆ ಪ್ರಾಣಿ ತನ್ನ ಅಹಂಕಾರವನ್ನು ಕಳೆದು 
ಕೊಳ್ಳಲಾರದು.ಏಕೆಂದರೆ ಇದರ ಚರ್ಮದಿಂದ ಮಾಡಿದ ತಮಟೆಇಂದ  "ಹಂ" ಎಂಬ ಧ್ವನಿ ಬರುವುದು.ಹಾಸಿಗೆಗೆ ಹತ್ತಿಯನ್ನುಬಡಿಯುವವನು ಅದರ ಕರುಳಿನಿಂದ ಬಿಲ್ಲಿನ ನಾರನ್ನು ಮಾಡಿ ಅದನ್ನು  ಹೊಡೆಯುವ ತನಕ ಇರದ  
ನಮ್ರತೆ,ಬಿಲ್ಲಿನ ನಾರನ್ನು ಮಾಡಿ ಹೊಡೆದಾಗ ಆಪ್ರಾಣಿಯ ಕರುಳು"ತೂಹೈ"(ನೀನಿರುವೆ) ಎಂದು ಹಾಡುವುದು.
ಹಾಗೆ ನಾನು ಹೋಗಿ ನೀನು ಎಂಬುದಾದಾಗಲೇ ಜೀವನದಲ್ಲಿ  ಜಾಗೃತನಾಗುವುದು."ನಾನು"ಎಂಬ ಅಜ್ಞಾನದಿಂದ
"ನೀನು"ಎಂಬ ಸುಜ್ಞಾನದೆಡೆ ಸಾಗಿದಾಗ ಜೀವನದಲ್ಲಿ ಜಾಗೃತನಾಗಿ ಸಜ್ಜನನಾಗುವನು."ದೇಹವೆಂಬ ಗುಡಿಯಲ್ಲಿ 
ಜ್ಞಾನವೆಂಬಜ್ಯೋತಿ" ಬೆಳಗುವುದು.ಆ ಜ್ಯೋತಿ ಜಗತ್ತನ್ನ ಬೆಳಗುವುದು. 
     ಶಂಕರಾಚಾರ್ಯರನ್ನು ಒಬ್ಬ ಶಿಷ್ಯ ಬಹಳ ಕಾಲದಿಂದಲೂ ಗುರುಸೇವೆಯನ್ನು ಮಾಡುತ್ತಿದ್ದರೂಅವನಿಗೆ ಉಪದೇಶವನ್ನು  ಕೊಟ್ಟಿರಲ್ಲಿಲ್ಲ.ಒಮ್ಮೆ ಶಂಕರಾಚಾರ್ಯರು ಕುಳಿತಿರುವಾಗ ಹಿಂದಿನಿಂದ ಯಾರೋ ಬರುವ ಸದ್ದು ಕೇಳಿ,
ಶಂಕರಾಚಾರ್ಯರು,ಯಾರವರು...?ಎಂದಾಗ ,ಶಿಷ್ಯನು ,"ನಾನು",ಎಂದ .ಆಗ ಶಂಕರಾಚರ್ಯರು "ಈ ನಾನೆಂಬುದು 
ಅಷ್ಟೊಂದುಇಷ್ಟವಾದರೆ ,ಅದನ್ನು ಅನಂತತೆಗೆ ವಿಸ್ತಾರ ಮಾಡು".ಅಂದರೆ ..ವಿಶ್ವವೇ ನಾನೆಂದು ತಿಳಿ .ಅಥವಾ ಅದನ್ನು ಒಂದೇ ಸಲ ತ್ಯಾಗ ಮಾಡು .ಅದು ಆಗದಿದ್ದಾಗ ,"ದಾಸನಾದ ನಾನು ,ಉಳಿಯಲಿ."ನಾನುದೇವರಸೇವಕ ",
ಭಕ್ತ ಎಂಬ ಅಹಂ,ಅಷ್ಟೇನೂ ಅಂಜಿಕೆ ಇಲ್ಲ ,ಆ ಭಾವವು ಕಡ್ಡಿಯಿಂದ ನೀರಿನ ಮೇಲೆ ಗೆರೆಎಳೆದಂತೆ ಅದುಬಹಳ ಕಾಲ 
ವುಳಿಯದು ಎಂದರಂತೆ.

ಹೀಗೆ ಮತ್ತೊಬ್ಬ ಸಾಧಕರಾದ ಬಸವಣ್ಣನವರನ್ನೇ ಅಲ್ಲಮ ಪ್ರಭು ಪರೀಕ್ಷೆ ಗೊಳಪಡಿಸಿದ ಪ್ರಸಂಗ.ಒಮ್ಮೆ 
ಬಸವಣ್ಣ ನವರ ಮಾತಿಗೆ ಗೌರವ ಕೊಟ್ಟು ಪ್ರಭು ಕಲ್ಯಾಣಕ್ಕೆ ಬಂದಾಗ ಪ್ರಭುರವರು  ಪರೀಕ್ಷೆಗೆ ಒಳಪಡಿಸಿದರಂತೆ.ಲಕ್ಷ ಜಂಗಮರಿಗೆ ನಿತ್ಯ ದಾಸೋಹ ಮಾಡಿಸುತ್ತಿದ್ದ ಬಸವಣ್ಣನವರಲ್ಲಿ ಮನೆಮಾಡಿದ್ದ 
ಅಹಂ ಹೋಗಲಾಡಿಸುವ ಸಲುವಾಗಿ ಅಲ್ಲಮರು ಹಸಿವಿನ    ಸೋಗುಹಾಕಿ  ಓಗುರವನ್ನಿಕ್ಕಿಸೆಂದು ಬಸವಣ್ಣನನ್ನು ಕೇಳುತ್ತಾರೆ .ಬಸವಣ್ಣನವರಿಗೆ ಸಮಸ್ಯೆಯಾಗುತ್ತದೆ.
ದಾಸೋಹಕ್ಕೆ ನೆರೆದಿದ್ದ ಜಂಗಮ ವೃಂದ ಊಟದ ದಾರಿ ನೋಡುತ್ತಾ ಕುಳಿತಿದೆ.ಇಲ್ಲಿ  ಪ್ರಭು
ಹಸಿವೆಂದು ಹುಯಿಲಿಡುತ್ತಿದ್ದಾರೆ. ಬಸವಣ್ಣನವರು ಪ್ರಭುವಿಗೆ ಎಲೆಹಾಕಿಸಿ ಭೋಜನವನ್ನು ಬಡಿಸಲು 
ಪ್ರಾರಂಭಿಸುತ್ತಾರೆ.ಲಕ್ಷ ,ಸಾವಿರ ಜಂಗಮರಿಗೆಮಾಡಿದ ಭಕ್ಷವೆಲ್ಲ  ಒಬ್ಬರೇ ತಿಂದು ಮುಗಿಸುತ್ತಾರೆ.
ಆದರೂ  ಅವರ ಹಸಿವೆ ಇಂಗುವುದಿಲ್ಲ.ಇದನ್ನರಿತ ಬಸವಣ್ಣನವರುಶರಣಾಗತರಾಗಿ ಕ್ಷಮೆ ಬೇಡುತ್ತಾರೆ.
ಆಗ ಪ್ರಭು "ಜಂಗಮ ದಾಸೋಹ ಮಾಡಿಸುತ್ತೇನೆ ಎಂಬ ಹಮ್ಮು ಭಿಮ್ಮು ನಿನಗೆ ಸಲ್ಲದು ಬಸವಣ್ಣ.
ನೀಡಲು ನೀನಾರು ?ಬೇಡಲು ನಾನಾರು ?  ಕೊಡುವವನು ಅವನೇ ಆಗಿರುವಾಗ ,
ನಾನು ನೀಡಿದೆ ,ನಾನು ಮಾಡಿದೆ, ಎಂಬ ಅಹಂ ತಳೆಯುವುದು ವಿವೇಕವಲ್ಲ"ಎಂದು ಹೇಳುತ್ತಾರೆ .
ಬಸವಣ್ಣನವರು ಹೊರಗೆ ಬಂದು ನೋಡಿದಾಗ ಜಂಗಮವೃಂದ   ಉಂಡು ಸುಖವಾಗಿ ಮಲಗಿರುವುದನ್ನು 
ಕಂಡೂ ಆಶ್ಚರ್ಯ ಚಕಿತರಾಗಿ "ಬಸುರಿ ಹೆಂಗಸಿನೂಟ ಹೊಟ್ಟೆಯ ಶಿಶುವ ದಣಿಸುವೊಲು,ಜಂಗಂಗಳ  
ಬಸುರೊಳು ಅಡಗಿಸಿ ಕೊಂಡು ನೀದಣಿಯಲು ಜಂಗಮಕೆ ಹಸಿವದೆಲ್ಲಿಯದು?ತಮ್ಮ ಮಹಾ ಗುರುವಿನ "ಹಿರಣ್ಯ ಗರ್ಭ "ಸ್ವರೂಪದರಿವು ಬಸವಣ್ಣನವರಿಗಾಗುತ್ತದೆ.ಹೀಗೆ ಮಹಾನ್
ಶರಣ ಸಂತ ಸಾಧಕ ರನ್ನು ಬಿಡದ ಅಹಂ  ಹುಲುಮಾನವರಾದ ನಮ್ಮನ್ನು ಬಿಡುವುದೇ ?

     ಅಹಂ ಎಂಬ ಮಾಯೆ ಆಗಾಗ ನಮಗೆ ಅರಿಯದಂತೆ ನಮ್ಮೊಳಗೇ ನುಸುಳುವ ಪ್ರಯತ್ನ ಮಾಡುತ್ತಿರುತ್ತದೆ.ಅದು 
ನಮ್ಮೊಳಗೇ  ಸುಳಿಯದಂತೆ ವಿವೇಕವೆಂಬ ಕೋಟೆಯಿಂದ ರಕ್ಷಿಸಿ ಕೊಳ್ಳುವುದು ಅಗತ್ಯವಾಗಿದೆ.ಹಾಗೆಯೇ ಅಹಂ ಎಂಬ ಕೋಟೆಯಿಂದಲೂ ಹೊರಬರಲುಆಧ್ಯಾತ್ಮದ ಪಾತ್ರ ಮಹತ್ವವಾದದ್ದು.                           

Dec 12, 2010

 ಕರ್ಮಣ್ಯೇ ವಾದಿಕಾರಸ್ಯೆ  

 ನೊಗಕೆ ಹೆಗಲು ಕೊಟ್ಟ ಹೋರಿ
 ಹೇರಿದಷ್ಟು ಹೇರ ಹೊತ್ತು
 ಸೂತ್ರದಾರ ತೋರಿದೆಡೆಗೆ ಸಾಗುತ

 ಕೇಳಲಿಲ್ಲ ಎಂದು ಅವನ
 ಹೇರನೆಷ್ಟು ಹೊರಿಸಿದೆ...?
 ಎತ್ತ ಕಡೆ ಹೊರಟಿಹೆ...?
 ಎನಗೆಷ್ಟು ನೀಡುವೆ..?

"ಕರ್ಮಣ್ಯೇ ವಾದಿಕಾರಸ್ಯೆ
ಮಾಫಲೇಶು ಕದಾಂಚನ"

ಮೂಕವಾಗಿ ದುಡಿದು ದಣಿದು,
ಧಣಿ ಇತ್ತ ಮೇವ ತಿಂದು
ಜೊಲ್ಲು ಸುರಿಸಿ ಗೊರಕೆ ಹೊಡೆದು 
ತಿಂದಲ್ಲೇ ಒರಗುತ ,

ನಸುಕಿನಲ್ಲೇ ನಿತ್ಯಕರ್ಮ,ಎಂದಿನಂತೆ
ಕಾಯಕ, ಎಂದು ಕೇಳಲಿಲ್ಲ ತನಗೆ
ತಾವು ಎಷ್ಟು ,ಎಲ್ಲಿ ಎಂದು,
ಕೊಟ್ಟ ಜಾಗ ಇಟ್ಟ ಮೇವು

ಬೆನ್ನ ಮೇಲೆ ಬಿದ್ದ ಪೆಟ್ಟು
ಕಾಲಿಗೊತ್ತೋ  ಕಲ್ಲುಮುಳ್ಳು
ಲೆಕ್ಕವಿಲ್ಲ ಕಾಯಕೆ,ಅರಿವರಾರು ದಣಿವನು 
 
ಮದ್ದು ಕೇಳಲಿಲ್ಲ ಗಾಯಕೆ
ಮೂಕ ಮನದ ರೋದಕೆ
ಮನುಜ ಲೋಕ ಮೂಕವೇ......?


ಸೋತರಂದೆ ಸಂತೆಗೆ, ಸಾಗದಿರೆ ಕಟುಕಗೆ 
ಮುಗಿಯಿತಂದೆ ಧನ್ಯತೆ,  
ಸೋತವಗೆ.... .ಎಲ್ಲಿ ಮಾನ್ಯತೆ....?...!!
 **************************************

Nov 14, 2010

  ಮಾಡಬೇಡಿ ನನ್ನ ದೇವರು 


 ದೇವನೆಂದು ಹೊಳೆವಂತೆ
 ತೊಳೆದು ಗುಡಿಯಲಿಟ್ಟರು
 ಎಣ್ಣೆ ನೀರು ಬಿಟ್ಟರು,  
 ಹೂಹಣ್ಣು ಇಟ್ಟರು



 ಗಂಧ ಹಚ್ಚಿ ,ಮಂದ, ಹಣತೆ  
 ಬೆಳಗಿಸಿಟ್ಟರು.ಕೈ ಮುಗಿದು
 ಕಣ್ಣ ಮುಚ್ಚಿ, ಬೇಡಿಕೆ ಮುಂದಿಟ್ಟರು
 ಇಚ್ಛೆ ಈಡೇರದಾಗ ,ಕಲ್ಲೆಂದು ಬಿಟ್ಟರು



 ಗರ್ಭ ಗುಡಿಯಲ್ಲಿ ಕೂಡಿ, 
 ಬೀಗ ಜಡಿದುಬಿಟ್ಟರು
 ಹೂಹಣ್ಣು ಎಣ್ಣೆ ಕಾಯಿಕದ್ದ,
 ಖೈದಿಯಾಗಿಟ್ಟರು


 ನಿಮ್ಮನೇ.......ನಾ ಬೇಡುವೆ
 ಮಾಡಬೇಡಿ ನನ್ನ ದೇವರು


ನಿಂತು ನಿಂತು ಕಾಲು ನೋವು
 ಕುಂತು ಕುಂತು ಕೀಲುನೋವು
 ತಾಳಲಾರೆ ಗುಡಿಯ ಕಾವು


 ಅರಿವರಾರು ನನ್ನ ನೋವು
 ಮಾಡ ಬೇಡಿ, ನನ್ನ ದೇವರು.
 ಹೊಡೆದಾಡಬೇಡಿ, ನನ್ನ
 ನೆಪವ ಹೂಡಿ ಎಲ್ಲರೂ.  

--

Nov 13, 2010





ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು
            ********************


*ಹೂಬತ್ತಿ*

ಬೆಂಕಿಯ  ಕಿಡಿಗಳಾಗಿ  
     ಹೊಮ್ಮದೇ
ಬೆಳಕಿನ ಕಿರಣಗಳಾಗಿ 
 ಹೊಮ್ಮಲಿ ಹೂ ಬತ್ತಿ

ಅವರಿಲ್ಲದೂಟ

      ಬಂದು ಹೋಗುವ  
               ನಡುವೆ           
      ನಗೆ ಧಗೆಗಳಲೆಗಳು
          ದೊಡ್ದಲೆಗೆ ಬಿದ್ದು
         ಹೋದವರ ನೆನಪು
        ಮತ್ತೆ ಮಹಾಲಯದಿ

              ಅವರಿಲ್ಲದೂಟ
          ಕೂಟ ಸೇರಲೇ ಕಾಟ
             ಸೇರಿದರು ಆಟ

           ದೀವಳಿಗೆ ಜಗಮಗಿಸಿ
             ದಿವಾಳಿಯಾದಾಗ
              ನೆನಪೊಂದು ನಗೆ
*********************** 
ಕ್ಷಮಿಸಿ ಸ್ನೇಹಿತರೆ,ಹಬ್ಬದ ದಿನಗಳಲ್ಲಿ ವಿದೇಶದಿಂದ ಸ್ವದೇಶಕ್ಕೆ
ಪಯಣಿಸುತ್ತಿದ್ದ ಕಾರಣ,ತಡವಾಗಿ ಶುಭಾಷಯ ಕೋರುತ್ತಿದ್ದೇನೆ   

Oct 28, 2010



ಎಲ್ಲ ಬಂಧಕು ಮಿಗಿಲು ಪ್ರಕೃತಿಯ ಒಡಲು

ಗಿರಿಕಾನನಗಳ ನಡುವೆಯೇ ಸಾಗಿಹ
ಸುಂದರ ವೇಣಿಯ ಹೆದ್ದಾರಿ 
ವನರಾಶಿಯ ಸೊಬಗಿಗೆ ರಹದಾರಿ

ನಯನ ಹರಿದರತ್ತತ್ತ ಒತ್ತೊತ್ತ ಹಸಿರಸಿರಿ
ವಾತ್ಸಲ್ಯದಿ ಒಂದಕೊಂದು ಬೆಸೆದ ಬೆಟ್ಟಹಾರ  
ನಟ್ಟನಡುವೆ ಪುಟ್ಟ ಮುದ್ದುಮನೆ

ಅಂಕು ಡೊಂಕು ಹಾದಿಗೇ ಎದುರೆ ಚಾಚಿದಂತೆ ಬೆಟ್ಟ
                                          ರವಿಕಿರಣದ ನರ್ತನದಿ                                            
ಪಂಚರಂಗಿ ಪರ್ಣಶಾಲೆ ಹಡೆದ ಹೊನ್ನದರ್ಶನ 
ಶೋಭಿತೆಯರ ಸಭಾಂಗಣ  
                                                                                              
ಸುಮನೋಹರ ಸುರಸುಂದರ ಬಿನ್ನಾಣಗಿತ್ತಿಯರು  
ಸುತ್ತಲು  ಜಲರಾಶಿಗೆ ಮುತ್ತಿನಿಂತು  ಗಿರಿವನವನೆ  
ಅಪ್ಪಿಕೊಂಡ ಆಗಸಕೆ ಸುವರ್ಣ  ತಳಿರ ತೋರಣ  

ಚುಮುಚುಮು ಚಳಿಯಲಿ ಚೈತ್ರನ ಬರವಿಗೆ
ತನ್ನೆಲೆಗಳನೆ  ಸುವರ್ಣಗೊಳಿಸಿ ಕಾದಿಹ 
ಸುಮನಸೆ ಹಸಿರಲೇ ಹಾಯ್ದ ಹೂವಿನ ಭೂಸಿರಿ

ತರಳೆಯರಿಲ್ಲದ ಊರಲಿ ಮಾಗಿದ ತಳಿರೆ ತಳೆದಿಹ  
ವರ್ಣರಂಜಿತ ಮೈಸೊಬಗು,ಆಹ್ವಾನಕಲಂಕೃತ 
ಹೂಧಾನಿ, ಮಂದಹಾಸದ ಮಿನುಗು  ಸ್ವಾಗತಕೆ  

ಸಸ್ಯ ಶ್ಯಾ - ಮಲೆಯರ ನಡುವೆ
ನಿತ್ಯ ಕೋಮಲೆಯರ ಮಾಯಮಾಲುಗಳು
ಎಲ್ಲ ಬಂಧಕು ಮಿಗಿಲು ಪ್ರಕೃತಿಯ ಒಡಲು
ಒಡಲೊಳಗೆ, ಭೇದವಿಲ್ಲದೆ  ಬೆರೆತು ಮರೆಯೋಣ
ಅರೆಘಳಿಗೆ  ಕಲ್ಲು ಮುಳ್ಳುಗಳ ಕಡಲು

 -----------------------------------

ಮೂರು ಮಾಸಗಳ ಮನೋಲ್ಲಾಸಕೆ ಮತ್ತು ಬ್ಲಾಗ್ ಲೋಕವನ್ನು ಪ್ರವೇಶಿಸಲು ಮೂಲ
ಕಾರಣ ಕರ್ತರು,ಪ್ರೇರಕರು, ಕವನಸ್ಪೂರ್ತಿಯಸೆಲೆಗಳೂ ಆದ,

        ನನ್ನ ಪ್ರೀತಿಯ  ಮಾನಸರಘುಪ್ರಸಾದ್ ರವರಿಗೆ  
         ದ್ವಿತೀಯ ವಿವಾಹ ವಾರ್ಷಿಕೋತ್ಸವದ ಹಾರ್ಧಿಕ ಶುಭ ಹಾರೈಕೆಯೊಂದಿಗೆ ಪ್ರೀತಿಯ
  ಉಡುಗೊರೆಯಾಗಿ ಈ  ಕವನಕಾಣಿಕೆ.   

ಪ್ರಕೃತಿಯ ಪೂರಣದಂತೆ ನಿಮ್ಮ ವೈವಾಹಿಕ
ಬದುಕು ಎಂದೆದೂ  ಹಸಿರಾಗಿರಲೆಂದು
ಹಾರೈಸುವ ಅಮ್ಮ ಕಲಾವತಿಮಧುಸೂಧನ್



Oct 18, 2010

ಅಂತರತಮ ನೀ ಗುರೂ.......




ಎಂಥಾ ಮೊಗವಿತ್ತೆ, ಅದಕೇ ಏನು ಗುನುಗಿಟ್ಟೆ ?
ಕಾಣುವ ಕಣ್ಣಿಗೆ ದುಗುಡವ ತುಂಬಿದ ಭಾವಾ ಏಕಿತ್ತೆ ..?ಗುರುವೇ

ನೋಟಕೆ ನಗುವಿನ ಸೋಗನು ಸಾರುವ ನಾಟಕ ಮರೆಸಿಟ್ಟೆ
ಏನೋ ಅಪರಾಧವೆಸಗಿದೆವೆಂದು ಯೋಚಿಸುವಂತಿಟ್ಟೆ
ಭಾವಕೆ ಸ್ಪಷ್ಟನೆ ನೀಡದೆ ಉಳಿದರೆ ಮುನಿಸು ಸರಿಯಷ್ಟೇ..
ಮುನಿಸೂ  ಸರಿಯಷ್ಟೇ...ಗುರುವೇ

ಬಾಹ್ಯಕೆ  ಒಪ್ಪು ಆಂತರ್ಯಕೆ ಮುಪ್ಪು ಏಕೇ ನೀನಿಟ್ಟೆ ?
ಊರು ದಬ್ಬುವ ಕಾಡು ತಬ್ಬುವ ಕಾಲ ಏಕಿತ್ತೆ ?  
ನೋಡಲು ಅಚ್ಚರಿಗೋಳ್ಳುತ ಬಯಸುವ ಬಯಕೆ ಏಕಿಟ್ಟೆ?  
ಬಳ್ಳಿಯ ತಬ್ಬಿದ  ಮರವನೆ  ಉರುಳಿಸಿ  ನೀ ಸಂತಸಪಟ್ಟೇ !
ನೀ ಸಂತಸಪಟ್ಟೆ....ಗುರುವೇ

ಬಾಡಿದ ಬಳ್ಳಿಗೆ ಬಂಧವ ಕಟ್ಟಿ ಕಾಯದ ಚಿಗುರಿಟ್ಟೆ
ಇರುಳಿನ ಕಂಬನಿ ಹಗಲಲಿ ಹೊಳೆವಾ ಇಬ್ಬನಿಯಾಗಿಟ್ಟೆ
ಅಂದದ ಹೂವಿಗೆ ಅಂತರತಮ ವೈರಾಗ್ಯವನೆಕಿಟ್ಟೇ?
ಮನಸು  ಬರಿದೇ ಮಾಡಿ ಬದುಕ ಬಿಂದಿಗೆ ತುಂಬಿಟ್ಟೆ
ಬಿಂದಿಗೆ ತುಂಬಿಟ್ಟೆ..ಗುರುವೇ

ನೇರನುಡಿಗೆ ನಿಷ್ಟೂರದ ಮುನ್ನುಡಿ ಬರೆದಿಟ್ಟೇ !                        
ನೆರವೂ ಬೇಕಾದಾಗ ನೆಂಟರ ನೆನಪೂ ಬಂದಿತ್ತೇ!
ಸಂಬಂಧಗಳಲಿ ಹೊಂದಾಣಿಕೆಯ ಏಕೇ ಹೊರಗಿಟ್ಟೇ?
ಮಾತಲೇ ಮುತ್ತನು ಸುರಿಸಿ ಸೆಳೆಯುವ ಕಲೆಯ ಮರೆಸಿಟ್ಟೇ
ಕಲೆಯಾ  ಮರೆಸಿಟ್ಟೆ ...ಗುರುವೇ
 

Sep 24, 2010

ನಾ ಕಂಡ ಕಾರ್ನಿಂಗ್

 ನಿಶಬ್ಧತೆಯ  ಶಾಂತತೆಯಲಿ,                                
ಸುಯ್ಯೆನುತ ಸೊಂಪಾಗಿ  ಬೀಸುವ ,
ತಂಗಾಳಿಗೆ ಮೈಯ್ಯೊಡ್ಡಿ
 ಕೊಂಬೆ ರೆಂಬೇಗಳಲಿ, ಚಾಮರ ಬೀಸುತ ,
ತಲೆದೂಗುತ ಜೋಗುಳ ಹಾಡುತಿವೆ.
ಎಲೆಗಳು ಸರಸರ ಮಾರ್ಧ್ವನಿಸುತಿದೆ.

ಹಕ್ಕಿಯ ಕಲರವವಿಲ್ಲಿಲ್ಲ ,
ಗಾಳಿಯ ಜೊತೆಯಾಡುವ  ಗಿಡಮರಗಳ  
ಸೋಬಾನೆಯೇ ಪರಿಸರವೆಲ್ಲ.

ವಿಸ್ತಾರ ರಸ್ತೆಯಲಿ  ಮೀರದ ನಿಯಮ,
ಸಶಬ್ಧ ಸುವೇಗದಿ ಸರಿದಾಡುವ
ಕಾರುಗಳದೇ  ಕಾರುಬಾರು.

ಪ್ರತಿ ಮನೆಯಂಗಳ ನಂದನವನವೇ,
ಕಣ್ಮನ ತಣಿಸುವ ಬಗೆಬಗೆ ಹೂಗಳು,
ಪ್ರಕೃತಿಯ ಸೊಬಗನು ನೂರ್ಮಡಿಗೊಳಿಸಿದೆ.

ಪಚ್ಚೆಯ ನಡುವೆ ಹಚ್ಚನೆ ಮನೆಗಳು,
ಕಾರ್ನಿಂಗ್ ಮನಗಳ ಕೈಚಳಕ
ಸ್ವಚ್ಛತೆಯೇ  ಪ್ರಾಮುಖ್ಯತೆ ಇಲ್ಲಿ ,
ನಿಯಮವ ಮೀರದ ಪರಿಸರಪ್ರೀತಿಯ,
ನಿಷ್ಕಲ್ಮಶನಗು ಪಸರಿಸಿದೆ.

ಶಾಂತತೆಯನು ಪ್ರತಿಬಿಂಬಿಸಿದೆ.
ಯಾರ ಗೊಡವೆ ಯಾರಿಗಿಲ್ಲ,
ಅವರ ಶ್ರದ್ಧೆ ಅವರದೇ,
ಕಂಡ ರಕ್ಕರದಿ ನಗುತ,
ಮುಂದೆ ಅವರು ಅವರೇ.

ಕಾರ್ನಿಂಗ್ ಕಾಂತ ಕಾಂತೆಯರು. 
ನಡುವೆ ಜೋಡಿ ಮುದ್ದುಗಿಳಿಗಳಾಟ ಚಿಲಿಪಿಲಿಸಿದೆ. 

Sep 13, 2010

ಜನತಾ ಮಾಧ್ಯಮ ಪತ್ರಿಕೆಯಲ್ಲಿ ೨೦ ಜೂನ್ ೨೦೧೦ ರಲ್ಲಿ ಪ್ರಕಟಗೊಂಡ "ಲಹರಿ"  

ಕವನ "ಆ ಕಾಣದವ"



 

Sep 11, 2010

ಓಂ ಗಂ ಗಣಪತಿಯೇ ನಮಃ  ಕವಿಗಾಯಕ ಗಣನಾಯಕ ಜನಪ್ರಾಣಕ ಸಿರಿಯೇ....     
Add caption