Sep 5, 2011

    ಆತ್ಮೀಯರಿಗೆಲ್ಲಾ ಡಾ.ರಾಧಕೃಷ್ಣನ್ ರವರ ಜನ್ಮದಿನದ ನೆನಪಿಗಾಗಿ  ಆಚರಿಸುತ್ತಿರುವ  ಶಿಕ್ಷಕರ ದಿನಾಚರಣೆಯ ಶುಭಾಶಯಗಳು. 
           ಕಾಕತಾಳಿಯವೆಂಬಂತೆ ಕಳೆದ ವರ್ಷ ಅಮೇರಿಕಾದಲ್ಲಿದ್ದ ಈ
ಸಂದರ್ಭದಲ್ಲಿ ಈ ದಿನದ ವಿಶೇಷತೆ ನೆನಪಿಗೆ ಬಾರದಿದ್ದರೂ ಆಕಸ್ಮಿಕವಾಗಿ 
ನನ್ನ ಬ್ಲಾಗ್ ಜನನವಾದದ್ದು ಈ ದಿನವೆಂದು ಅರಿವಿಗೆ ಬಂದಾಗ ನನ್ನ ನೆನಪಿಗೆ ಬರದಿದ್ದರು ನನ್ನಚಟುವಟಿಕೆ, ನನ್ನೊಳಗಿನ ಶಿಕ್ಷಕಿಗೆ ಎಚ್ಚರಿಸಿತ್ತು. 
ಬದುಕಿನಲ್ಲಿ ಬಂದು ಹೋಗುವ ಪ್ರತಿಯೊಬ್ಬರಿಂದಲೂ ಒಂದೊಂದು ರೀತಿಯ ಶಿಕ್ಷಣ ನಮಗೆ ಲಭ್ಯವಾಗುತ್ತಿರುತ್ತದೆ.ಹಾಗಾಗಿ ನನ್ನ ಪಯಣದಲ್ಲಿ ಬಂದು
ಹೋಗಿರುವ,ಮುಂದೆ ಬರುವ ಒಬ್ಬೊಬ್ಬರು ಗುರುವೇ ಎಂದು ನನ್ನ ಭಾವನೆ.  


ಭಾವದ ಒಡಲು...ಕಾವ್ಯದ ಕಡಲು
****************


ಕಾವ್ಯವೇ ಅಗಾಧ ನಿನ್ನ ಜ್ಞಾನದ ಕಡಲು
ನಮಗೆ ಸಾಧ್ಯವೇ ಅದರ ಒಡಲನಳೆಯಲು ....!!!!!!
ಒಡಲನಳೆಯಲು.

ಜಲದ ಮೇಲೆ ಬಿದ್ದ ಹನಿಯು
ಪುಷ್ಪವಾಗಿ ಅರಳಿದಂತೆ
ಹೊಳೆಯ ಮೇಲೆ ಬಿದ್ದ ಮಳೆಯ
ಹನಿಗಳರಳಿದಂತೆ

ಎದೆಯ ಒಳಗೆ ಎದ್ದ ಭಾವ
ನೋವ ನಲಿವ ನುಂಡ ಜೀವ
ಭಾವದೊಲವ ಕಾವಿನಲ್ಲಿ ಹಡೆದ ಶಿಶುಗಳು.
ಅನುಭವದ ದರ್ಪಣವೇ ಆಟಿಕೆಗಳು .

ಭಾವ ಹೃದಯ ಸಂವಾದ
ಅನುಭಾವ ಗೀತ ಸ್ಪಂದ
ಅಕ್ಷರಕ್ಷರದಲಿ ಬೆಸೆವ ಭಾಷೆ ಭಾವಕೆ

ಮಣ್ಣ ಸಾಕ್ಷಿ ಹುಲ್ಲು ಗರಿಕೆ
ಬದುಕ ಸಾಕ್ಷಿ ಭಾವ ಸನಿಕೆ
ಭಾವದೊಲುಮೆಯೊಡನೆ
ತುಡಿವ ಮುಗ್ಧ ಮಕ್ಕಳು..ಮುಗ್ಧ ಮಕ್ಕಳು

ಮೊಗ್ಗಿನಲ್ಲಿ ಮುಗ್ಧವಾಗಿ
ಅರೆಬಿರಿಯೇ ಪ್ರೌಢವಾಗಿ
ಅರಳುತಾ ಪ್ರಬುದ್ಧವಾಗಿ
ಮನದ ಬನದಲಿ

ಹೃದಯದಲ್ಲಿ ಬೆಚ್ಚನೆ
ಕುಳಿತ ಸವಿನೆನಪುಗಳು
ಕಾವು ಪಡೆದು ಮೊಟ್ಟೆಯೊಡೆದು
ರೆಕ್ಕೆ ತೆರೆದು ಹಾರುತಿವೆ
ಎದೆಯಿಂದ ಎದೆಗೆ .... ಎದೆಯಿಂದ ಎದೆಗೆ

ವರುಷದಾ ಹರುಷದಲ್ಲಿ
ಹವಳ ಮುತ್ತು ಹೆಕ್ಕಲಿಕ್ಕೆ
ಹರಸಿರೆಂದು ಹಾಡುತಿದೆ ಭಾವ ಜೀವವೂ...
ಭಾವ ಜೀವವೂ........

ಕಾವ್ಯವೇ..ಅಗಾಧ.....ನಿನ್ನ ಜ್ಞಾನದ ಕಡಲು ....

***********************