Apr 20, 2011

ಉಳಿಯಬೇಕು ಬದುಕು ಎಲ್ಲರೆದೆಗಳಲಿ


ಉಳಿಯಬೇಕು ಬದುಕು ಎಲ್ಲರೆದೆಗಳಲಿ
ಬಾಯಾರಿ ಬಳಲಿದಾಗ
ನೀರಡಿಕೆಯನಳಿಸುವ ಜೀವಜಲದಂತೆ
ಭೂಮಿಯನು ತಣಿಸುವ ಕೆರೆ ತೊರೆಯಂತೆ

ಉಳಿಯಬೇಕು ಎಲ್ಲರೆದೆಗಳಲಿ
ಸವಿಯಾಗಿ ತಂಪೆರೆವ ತನಿವಣ್ಣಿನಂತೆ 
ಫಲವನೀವ ಪಾದಪಗಳಂತೆ  
ಬೇಧವೆಣಿಸದೆ ನೆರಳನೀವ ವಟ ವೃಕ್ಷದಂತೆ

ಉಳಿಯಬೇಕು ಬದುಕು  ಎಲ್ಲರೆದೆಗಳಲಿ
ತಲೆಮಾರನು ಸಲಹುವ ನಾರಿಕೇಳ 
ಕಲ್ಪವೃಕ್ಷದಂತೆ, ಬೇಧವಿರದೇ ಹಬ್ಬಿ 
ಪಸರಿಸುವ  ಹೂಗಳ ಪರಿಮಳದಂತೆ.

ಉಳಿಯಬೇಕು ಬದುಕು ಎಲ್ಲರೆದೆಗಳಲಿ 
ಇಂಪಾದ  ಕೋಗಿಲೆಯ ಮಧುರಗಾನದಂತೆ
ಹಕ್ಕಿಗಳ ಚಿಲಿಪಿಲಿಯ ಕಲರವದಂತೆ
ಆಹ್ಲಾದವನಿವ  ಪ್ರಕೃತಿಯ 
ಸೌಂದರ್ಯದ ಹಚ್ಚ ಹಸುರಿನಂತೆ  

ಉಳಿಯಬೇಕು ಬದುಕು ಎಲ್ಲರೆದೆಗಳಲಿ
ಜುಳುಜುಳು ಹರಿವ  ಜಲದ ಕಲರವದಂತೆ, 
ಉಳಿಯಬೇಕು ಬದುಕು ಎಲ್ಲರೆದೆಗಳಲಿ
ಪುರಂದರಕನಕ  ದಾಸವರೇಣ್ಯರ ಸಾಮಾಜಿಕ 
ಕಳಕಳಿಯ ಸುಮಧುರ ಸಂಕೀರ್ತನದಂತೆ 

ಉಳಿಯಬೇಕು ಬದುಕು ಎಲ್ಲರೆದೆಗಳಲಿ
ಮಾನವತೆಯ ಮೆರೆದ ಶಂಕರ
ರಾಮಾನುಜ ಮಧ್ವ ಶಿವಶರಣ ಅಂಬೇಡ್ಕರ್ರಂತೆ,  
ವೀರ ಯೋಧರ ನಿಸ್ವಾರ್ಥದಂತೆ

ಉಳಿಯಬೇಕು ಬದುಕು ಎಲ್ಲರೆದೆಗಳಲಿ
ಮುದ್ದುಕಂದನ ಮುಗ್ಧ ನಗುವಿನಂತೆ
ಅಚ್ಚಳಿಯದ ಅಂದದ  ಹೂನಗುವಿನಂತೆ
ಹಸುಗೂಸಿನ ನಸುನಗುವಂತೆ

ಉಳಿಯಬೇಕು ಬದುಕು ಎಲ್ಲರೆದೆಗಳಲಿ
ಜಗವಿರುವರೆಗೆ ಅರಿವರಳಿಸುವ 
ಕಾವ್ಯೋತ್ಸವದ ಮೂರ್ತಿಗಳಾಗಿ ಮೆರೆಯುತ್ತಿರುವ
ಕುವೆಂಪು ಬೇಂದ್ರೆ ಗುಂಡಪ್ಪ ಕಾರಂತರಂತೆ 

ಉಳಿಯಬೇಕು ಬದುಕು ಎಲ್ಲರೆಗಳಲಿ 
ವಿಕಲಚೇತನರ ಆತ್ಮ ಚೈತನ್ಯದಂತೆ 
ನಲಿಯಬೇಕು ನೆನಪು ದೀನದಲಿತರ ,
ವಿಕಲ ಚೇತನರ ಬದುಕಿನಲಿ 

ಅಳಿಯಬೇಕು ಎಲ್ಲರೆದೆಗಳಲಿ 
ದ್ವೇಷ ಅಸೂಯೆ ಅಹಂ 
*************