May 7, 2015

ನಿನ್ನನೀ.. ಗೆಲ್ಲು..!!!


ಎಲ್ಲವನು ಬಲ್ಲವನು
ಎಂದೆಣಿಸಿ ಬೀಗುತ
ತಾಮಸ ಗುಣಗಳ
ಗೆಲ್ಲುವಲಿ ಸೋಲುತ
ಬಿದ್ದರೂ ಮೀಸೆ
ಮಣ್ಣಾಗದ ಪರಿ
ಪರಿಹಾಸ್ಯಕೆ ದಾರಿ 
ಮೊದಲು ಹಿಡಿ
ನಿನ್ನನೀ ಗೆಲ್ಲುವ ಗುರಿ
 
ನರ..ನರಿಯಾದಾಗ 


ಮರಹತ್ತಿಸಿ ಬುಡ ಕತ್ತರಿಸಿ
ಕಾಣದಂತಿದ್ದರೂ
ಬಿದ್ದಲ್ಲೇ ಬೇರ್ಬಿಟ್ಟು
ಚಿಗುರೊಡೆದು ನಗುವಾಗ
ಕಡಿದುಬಿದ್ದ ಕೊಂಬೆ 
ಕೊನರಿ ಎದ್ದು  ಬೆಳೆವಾಗ

ಪೊಳ್ಳು ಭರವಸೆಯ ಮೂರ್ಖ 
ನರಿಯಲ್ಲದೆ ನರನೇ..??

May 4, 2015


ನೀನೊಂದು ನಗುವ ಹೂವಾದೆಯಲ್ಲಾ  

ಓ ಹೂವೇ ನೀನೊಂದು ಅಂದದ ಹೂ
ಅಂತರಂಗದಲಡಗಿದೆ
ಯಾರರಿಯದ ನೋವು
ಕೊಂಬೆರೆಂಬೆ ಕಣಕಣವು ಮುಳ್ಳು

ಅದಲೆಕ್ಕಿಸದೆ ನೀನಿಂದು ಅರಳಿ 
ಘಮಘಮಿಸುತಿಹೇ ಪರಿಮಳ ಬೀರುತಿಹೆ
ಪ್ರಕೃತಿಯ ಸೊಬಗ ಇಮ್ಮಡಿಸುತಿಹೆ
ನೋವ ಮರೆತು ಅರಳಿ ನಗುತಲಿರುವೆ,

ನಿನ್ನ ಹಿರಿಮೆಗೆ ಹಿಗ್ಗುವರಿಲ್ಲ,
ಇದ್ದುದೊಂದು ಮನ ಇಂದಿಲ್ಲ,
ಮೋಡದಲಿ ಮಿನುಗುವ ತಾರೆಯಗಿದೆಯಲ್ಲ,
ಆ ಹಿಗ್ಗಿನ ನೆನಪೇ ಒಂದುತ್ತೇಜಕವೆಲ್ಲ

ಒಂದೊಂದೇಳ್ಗೆಯ ಹಿಂದೆಯೂ 
ಆ ಹಿಗ್ಗಿನ ನೆನಪೇ ಕಂಬನಿಯ 
ಹೊಳೆಯಾಗಿ ಹರಿಯುತಿದೆಯಲ್ಲ 
ಮೈ ತುಂಬಿ  ನೋವು ಮೊಗತುಂಬಿ ನಗುವು 

ನಿನ್ನಳಲು ನಿನ್ನನ್ನೇ ಬಾಡಿಸಿ 
ಬಸವಳಿಸುತಿದೆಯಲ್ಲ ಅದರಲೇ 
ನಗುನಗುತಾ ಚಿತ್ತಾರ ಹಾಡಿರುವೆ,
ಮುದ ನೀಡುತಿರುವೆ. 

ಬಾಡುತಿಹ ಹೂಗೆ ಮಳೆ ಹನಿದಂತೆ  
ತಾರೆ ಮಿನುಗಿ ಮರೆಯಾಗುತಿದೆ
ಆ ನೋವಲೇ ನಗುನಗುತಾ 
ಅಂತ್ಯವಾಹ್ವಾನಿಸುತಿರುವೆ,

ಶಿವನ ಪಾದದಡಿ ಸೇರಲು ಅನುವಾಗುತಿರುವೆ 
ಭವ್ಯ ಭವಿತವ್ಯಕ್ಕೂ  ಮೊಗಮಾಡಿ ನಿಂತರೂ
ಭೂತದಂದದಿ  ಕಾಡಿ ಇರಿಯುತಿದೆಯಲ್ಲ 

ನೆರಳು ಬಿಸಿಲಾಟದಲಿ  ನಲುಗುತಿಹ ಹೂವೇ 
ನೋಡಲು ನೀನೊಂದು ನಗುವ ಹೂವಾದೆಯಲ್ಲಾ