Jul 2, 2011

ಅನುಭವದ ಕಾಂತಿ  

ಹಸಿ ಕಟ್ಟಿಗೆ ಹೊಗೆಯಟ್ಟಲು 
ಉಸಿರು  ಕಟ್ಟಿ ಶ್ವಾಸ ಚೆಲ್ಲಿ
ದಗದಗಿಸುವ  ಒಲೆಯುರಿಯಲಿ
ಹಸಿವು ಕುದಿದು ಹದವಾಗಿ
ಕಾದಿಹ ಹಲವು ಹಸಿವುಗಳ  ತಣಿಸಿ

ಭವಿತವ್ಯದ ನಿರೀಕ್ಷೆಯಲಿ
ನಿಟ್ಟುಸಿರು,  ಬಿಕ್ಕಳಿಕೆಯಲಿ,

ಹೊಗೆಯಲ್ಲಿ ಕಂದಿದ
ನಿಸ್ತೇಜ ನೇತ್ರದಲಿ
ಹನಿಗೂಡಿ ಹಳ್ಳ ಹರಿದು
ದಡ ದಾಟಿ ತುಳುಕಿ ಕೆನ್ನೆ ಮೇಲೆ
ಹರಿದ ಕಂಬನಿಗಳೇ ಹಲವು
ಸುಕ್ಕುಗಳಾಗಿ ಕವಲೊಡೆದು
ನಿಸ್ತೇಜ ನರವಾದಾಗ ,
ಅವ್ವನೆನಲು ಅಂಜಿಕೆಯೇ ...????!!!!! .

ಬಳಲಿದ ಜೀವದ  ಬಯಕೆಗಳೆಲ್ಲಾ...
ಅಲಕ್ಷದ ಕಸಬರಿಕೆ ,

ಅಂಗಳದಲ್ಲಿ  ರಂಗೋಲಿ ಇಡಲು  
ಗೋಮೆಯ ಹಳೆ ಹೆಕ್ಕಳಿಕೆಯ  ಹೆಕ್ಕಿ
ಮತ್ತೆ ಮತ್ತೆ ಓರಣಗೊಳಿಸಿ
ಸೋತ ಕೈ ನರಗಳು
ನೂರಾರು ನೆರಿಗೆಯ ಕವಲುಗಳು.

ನಿತ್ಯ  ಗುಡಿಸಿ ಸಾರಿಸಿ
ಕಲ್ಲುಗಳು  ಹಲ್ಲು ಬಿಟ್ಟಂತೆ
ಅಸ್ತಿ ಪಂಜರ... ಬಸಿದ  ಬದುಕು.

ಬರವಿಲ್ಲದ ಕನಸುಗಳಲ್ಲೇ
ಮಾನವತೆಯ  ಧ್ಯಾನಿಸಿ
ಸಹನಾಮುರ್ತಿಯಾಗಿ
ಬದುಕು ಸಹಿಸಿದ
ಸಾವಿರ ಸುಕ್ಕಿಗೂ ... ಸಾಸಿರ ಕಥೆಗಳು .

ಬಯಕೆ ಬತ್ತಿದ  ನಿಸ್ತೇಜ ಕಂಗಳ  
ಅಸಹಾಯಕ  ನೋಟದಲ್ಲೂ
ಮಿಂಚುವ........  
ಸಾಧನೆಯ ಶಾಂತಿ,
ಅನುಭವದ ಕಾಂತಿ.
ಅವಳ ಶ್ರಮಕ್ಕೆ ದಕ್ಕಿದ್ದು
ಆಶ್ರಮದಲ್ಲಿ ವಿಶ್ರಾಂತಿ...........!!!!!!!
*********************